ಸದ್ಯದಲ್ಲೇ ಸಿಎಂ ದೆಹಲಿ ಪ್ರವಾಸ, ಗರಿಗೆದರಿದ ಚಟುವಟಿಕೆ

ಬೆಂಗಳೂರು,ಅ.3- ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಸದ್ಯದಲ್ಲೇ ದೆಹಲಿ ಪ್ರವಾಸ ಕೈಗೊಳ್ಳುತ್ತಾರೆಂಬ ವಿಚಾರ ಸಚಿವಾಕಾಂಕ್ಷಿಗಳಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಗರಿಗೆ ದರುವಂತೆ ಮಾಡಿದೆ.
ಮುಖ್ಯಮಂತ್ರಿಗಳು ಅಧಿಕೃತವಾಗಿ ರಾಜ್ಯದ ಯೋಜನೆಗಳ ಕುರಿತು ಚರ್ಚಿಸಲು ಕೇಂದ್ರ ಸಚಿವರ ಭೇಟಿಗೆ ತೆರಳುತ್ತಿದ್ದರೂ, ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದಾರೆ.
ವಿಧಾನ ಮಂಡಲದ ಮಳೆಗಾಲದ ಅಧಿವೇಶನ ಮುಕ್ತಾಯವಾಗಿರು ವುದರಿಂದ ಸಚಿವಾಕಾಂಕ್ಷಿಗಳ ಬಹುದಿನಗಳ ಬೇಡಿಕೆಗೆ ಈ ಬಾರಿಯಾದರೂ ಪಕ್ಷದ ಹೈಕಮಾಂಡ್‍ನಿಂದ ಗ್ರೀನ್ ಸಿಗ್ನಲ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಸಚಿವಾಕಾಂಕ್ಷಿಗಳು ಅಂದುಕೊಂಡಂತೆ ಸಿಎಂ ವರಿಷ್ಠರನ್ನು ಭೇಟಿಯಾದರೆ, ಈ ವಾರಾಂತ್ಯದಲ್ಲಿ ಸಂಪುಟಕ್ಕೆ ಹೊಸಬರ ಆಗಮನವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮುಖ್ಯಮಂತ್ರಿಗಳು ಅಧಿಕೃತ ಸರ್ಕಾರಿ ಯೋಜನೆಗಳ ಕುರಿತು ಚರ್ಚೆಗೆ ದೆಹಲಿಗೆ ತೆರಳುದರೂ, ಈ ಬಾರಿ ಸಂಪುಟ ಪುನಾರಚನೆಯ ವಿಷಯವೇ ಪ್ರಮುಖವಾಗಿ ಚರ್ಚೆಗೆ ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಹೇಗಾದರೂ ಮಾಡಿ 2023ಕ್ಕೆ ಮತ್ತೆ ಅಧಿಕಾರಕ್ಕೆ ಬರಲು ಎಲ್ಲ ರೀತಿಯ ಕಾರ್ಯತಂತ್ರ ರೂಪಿಸುತ್ತಿದ್ದು, ಸಂಪುಟ ಪುನಾರಚನೆಯೂ ಅದರ ಒಂದು ಭಾಗವಾಗಿದೆ ಎಂದು ಹೇಳಲಾಗಿದೆ.
ಈಗ ಖಾಲಿ ಇರುವ ಆರು ಸ್ಥಾನಗಳ ಜೊತೆಗೆ ಹಾಲಿ ಇರುವ ಐದರಿಂದ ಆರು ಹಿರಿಯ ಸಚಿವರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ಆಲೋಚನೆ ನಡೆಸಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
ಪ್ರಮುಖವಾಗಿ ಬಿಜೆಪಿಗೆ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಮತ್ತು ರಾಜ್ಯದೆಲ್ಲೆಡೆ ಕುರುಬ ಸಮುದಾಯದ ಮತಗಳನ್ನು ತನ್ನತ್ತ ಸೆಳೆಯಲು ಪಕ್ಷ ಕಾರ್ಯತಂತ್ರ ರೂಪಿಸುತ್ತಿದ್ದು, ಅದಕ್ಕೆ ಪೂರಕವಾಗಿ ಸಂಪುಟ ಪುನಾರಚನೆಯಾದರೆ, ಕೆಲವು ಸಚಿವರ ಬದಲಾವಣೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ.
ಜನಪ್ರಿಯವಲ್ಲದ ಮತ್ತು ದಕ್ಷವಾಗಿ ಕೆಲಸ ಮಾಡದ ಸಚಿವರನ್ನು ಕೈಬಿಟ್ಟು ಬೇರೆಯವರಿಗೆ ಅವಕಾಶ ಕೊಡಬೇಕೆಂಬ ವಾದ ಇದೆ. ಹೈಕಮಾಂಡ್ ಕೂಡ ಇದೇ ಚಿಂತನೆಯಲ್ಲಿ ಇದೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿಬಂದಿತ್ತು.
ಎರಡು ಹಂತದಲ್ಲಿ ಸಂಪುಟ ವಿಸ್ತರಣೆ ಮಾಡುವ ನಿರೀಕ್ಷೆಯಿದ್ದು, ಹಿಂದುಳಿದ ವರ್ಗಗಳ ಮತಗಳನ್ನು ಹಿಡಿದಿಟ್ಟುಕೊಳ್ಳಲು ಮೊದಲಿಗೆ ರಮೇಶ್ ಜಾರಕಿಹೊಳಿ ಮತ್ತು ಕೆ ಎಸ್ ಈಶ್ವರಪ್ಪ ಸೇರಿ 3-5 ಮಂದಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.
ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಕೂಡ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಸುಳಿವು ನೀಡಿದ್ದಾರೆ. ಇದೇ ವೇಳೆ ದಕ್ಷವಾಗಿ ಕೆಲಸ ಮಾಡದ ಸಚಿವರನ್ನು ಬದಲಾಯಿಸಿ ಸಂಪುಟ ಪುನಾರಚನೆ ಮಾಡಬಹುದು ಎಂಬ ಸುದ್ದಿಯೂ ಇದೆ. ಆದರೆ ಬಿಜೆಪಿಯ ಒಂದು ಮೂಲದ ಪ್ರಕಾರ ಸಂಪುಟ ಪುನಾರಚನೆಯ ಆಲೋಚನೆ ವರಿಷ್ಠರ ಮನಸಿನಲ್ಲಿ ಇಲ್ಲ ಎನ್ನಲಾಗಿದೆ. ನಳೀನ್ ಕುಮಾರ್ ಕಟೀಲ್ ಕೂಡ ಇತ್ತೀಚೆಗೆ ಇದೇ ಧಾಟಿಯಲ್ಲಿ ಮಾತನಾಡಿದ್ದರು.
ಸಿಎಂ ಬಳಿ ಹೆಚ್ಚುವರಿ ಖಾತೆಗಳು:
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಎಂಟು ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಇದರಿಂದ ಅವರ ಮೇಲೆ ಅಪರಿಮಿತ ಒತ್ತಡವೂ ಇದೆ. ಹಣಕಾಸು, ಗುಪ್ತಚರ, ಸಂಸದೀಯ ವ್ಯವಾರ, ಡಿಪಿಎಆರ್, ಬೆಂಗಳೂರು ನಗರಾಭಿವೃದ್ಧಿ ಖಾತೆಗಳ ಜೊತೆಗೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ, ಅರಣ್ಯ ಮತ್ತು ಆಹಾರ ನಾಗರಿಕ ಪೂರೈಕೆ ಖಾತೆಗಳ ಹೆಚ್ಚುವರಿ ಜವಾಬ್ದಾರಿ ಸಿಎಂ ಮೇಲಿದೆ.
ಅರಣ್ಯ, ಆಹಾರ, ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಉಮೇಶ್ ಕತ್ತಿ ಅಕಾಲಿಕವಾಗಿ ಮೃತಪಟ್ಟಿದ್ದರಿಂದ ಅವರ ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಇನ್ನು ಈಶ್ವರಪ್ಪ ರಾಜೀನಾಮೆ ಬಳಿಕ ಅವರ ಪಂಚಾಯತ್ ರಾಜ್ ಮತ್ತು ಗ್ರಾಮೀನಾಭಿವೃದ್ಧಿ ಖಾತೆಯೂ ಸಿಎಂ ಬಳಿಯೇ ಇದೆ. ಈಶ್ವರಪ್ಪಗೆ ಮತ್ತೆ ಅದೇ ಖಾತೆಯನ್ನು ಮರಳಿ ಕೊಡುವ ಸಾಧ್ಯತೆ ಇದೆ.
#ಸಚಿವ ಸ್ಥಾನದ ಆಕಾಂಕ್ಷಿಗಳು
- ರಮೇಶ್ ಜಾರಕಿಹೊಳಿ
- ಕೆ.ಎಸ್.ಈಶ್ವರಪ್ಪ
- ಎಂ.ಪಿ.ರೇಣುಕಾಚಾರ್ಯ
- ರಾಜುಗೌಡ
- ಎಸ್.ಎ.ರಾಮದಾಸ್
- ಅಪ್ಪಚ್ಚು ರಂಜನ್
- ಪಿ.ರಾಜೀವ್
- ಎಂಪಿ ಕುಮಾರಸ್ವಾಮಿ
- ಜಿ.ಎಚ್. ತಿಪ್ಪಾರೆಡ್ಡಿ
- ಕೆ ಪೂರ್ಣಿಮಾ ಶ್ರೀನಿವಾಸ್
- ದತ್ತಾತ್ರೇಯ ಪಾಟೀಲ ರೇವೂರ
- ಎನ್ ಮಹೇಶ್
- ಸಿ ಪಿ ಯೋಗೇಶ್ವರ್
- ಅರವಿಂದ್ ಬೆಲ್ಲದ