ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಹಾರಿ ಟೆಕ್ಕಿ ಆತ್ಮಹತ್ಯೆ; ಪತಿ ಪೊಲೀಸ್ ವಶಕ್ಕೆ..

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಬೇಸರಗೊಂಡು ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ಅಪಾರ್ಟ್‌ಮೆಂಟ್ ಕಟ್ಟಡದ 9ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಣತ್ತೂರು ಮುಖ್ಯರಸ್ತೆಯ ಬಳ್ಳಗೆರೆ ಸಮೀಪದ ದಿಶಾ ಅಪಾರ್ಟ್‌ಮೆಂಟ್ ನಿವಾಸಿ ಉಪಾಸನಾ ರಾವತ್ (30) ಮೃತ ದುರ್ದೈವಿ. ಈ ಘಟನೆ ಸಂಬಂಧ ಮೃತಳ ಪತಿ ನಿಹಾರ್ ರಂಜನ್ ರಾವತ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಸೋಮವಾರ ರಾತ್ರಿ ಜಗಳವಾಗಿದೆ. ಇದರಿಂದ ಬೇಸತ್ತ ಆಕೆ ಮಂಗಳವಾರ ಬೆಳಗ್ಗೆ ಅಪಾರ್ಟ್‌ಮೆಂಟ್ ಕಟ್ಟಡದ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚ್ಛೇದನಕ್ಕೆ ತಯಾರಾಗಿದ್ದ ದಂಪತಿ: ಒಂಬತ್ತು ವರ್ಷಗಳ ಹಿಂದೆ ಉಪಾಸನಾ ಹಾಗೂ ನಿಹಾರ್ ರಂಜನ್ ವಿವಾಹವಾಗಿದ್ದು, ಮದುವೆ ಬಳಿಕ ಬಳ್ಳಗೆರೆಯ ಅಪಾರ್ಟ್‌ಮೆಂಟ್‌ನಲ್ಲಿ ದಂಪತಿ ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಇಬ್ಬರೂ ಉದ್ಯೋಗದಲ್ಲಿದ್ದರು. ಸಂತಾನ ಇಲ್ಲದ ಕಾರಣ ದಂಪತಿ ಮಧ್ಯೆ ಇತ್ತೀಚೆಗೆ ಮನಸ್ತಾಪವಾಗಿದ್ದು, ವಿವಾಹ ವಿಚ್ಛೇದನ ಪಡೆಯಲು ಮುಂದಾಗಿದ್ದರು. ಕೆಲ ದಿನಗಳಿಂದ ಕೌಟುಂಬಿಕ ವಿಚಾರವಾಗಿ ಉಪಾಸನಾ ಹಾಗೂ ನಿಹಾರ್ ಪರಸ್ಪರ ಜಗಳವಾಡುತ್ತಿದ್ದರು. ಅಂತೆಯೇ ಸೋಮವಾರ ರಾತ್ರಿ ಕೂಡ ದಂಪತಿ ಮಧ್ಯೆ ಗಲಾಟೆಯಾಗಿದೆ. ಈ ಬೆಳವಣಿಗೆಯಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪತಿಯ ಶಿಕ್ಷೆಯಾಗಲಿ-ಮರಣ ಪತ್ರ: ಮೃತಳ ಮನೆಯಲ್ಲಿ ಮರಣ ಪತ್ರ ಪತ್ತೆಯಾಗಿದೆ. ಇದರಲ್ಲಿ ತನಗೆ ಪತಿ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿರುವ ಆಕೆ, ಲೈಂಗಿಕ ವಿಡಿಯೋ ಚಿತ್ರೀಕರಿಸಿ ಕೂಡ ಕಿರುಕುಳ ಕೊಟ್ಟಿದ್ದಾನೆ. ಈ ಕೃತ್ಯಕ್ಕೆ ಆತನಿಗೆ ಶಿಕ್ಷೆಯಾಗಬೇಕು ಎಂದು ಮೃತ ಉಪಾಸನಾ ಬರೆದಿದ್ದಾರೆ ಎನ್ನಲಾಗಿದೆ. ಈ ಘಟನೆ ಸಂಬಂಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.