ಹೆದ್ದಾರಿಯಲ್ಲೇ ಶಾಮಿಯಾನ ಹಾಕಿ ಧರಣಿ ಕುಳಿತ ಜನರು; ಮೈಸೂರು ಬೆಂಗಳೂರು ರಸ್ತೆ ಬಂದ್
ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ 15ಕ್ಕೂ ಹೆಚ್ಚು ಹಳ್ಳಿಗಳ ಜನರು ಹೆದ್ದಾರಿ ಬಂದ್ ಮಾಡಿದ್ದು ಕಾರಣವಾಗಿದೆ.
ಹನಕೆರೆ ಸಮೀಪ ಅಂಡರ್ಪಾಸ್ ನಿರ್ಮಾಣದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೊಂದರೆ ಆಗಲಿದೆ ಎಂದಿದ್ದಾರೆ.
ಭರವಸೆ ಕೊಟ್ಟು ಕಾಮಗಾರಿ ಮಾಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು. ಪ್ರತಿಭಟನೆ ಮಾಡುತ್ತಿದ್ದಾರೆ. ಗ್ರಾಮಸ್ಥರು, ವಿದ್ಯಾರ್ಥಿನಿಯರು, ಮಹಿಳೆಯರಿಗೆ ಓಡಾಡಲು ಸಮಸ್ಯೆ ಆಗುತ್ತಿದ್ದು ಈ ಸಮಸ್ಯೆಗೆ ಪರಿಹಾರವಾಗಿ ಮೇಲ್ಸೇತುವೆ ಕಾಮಗಾರಿ ಪ್ರಾರಂಭ ಮಾಡು ವರೆಗೂ ಬಂದ್ ಹಿಂಪಡೆಯಲ್ಲವೆಂದು ಪಟ್ಟು ಹಿಡಿದು ಧರಣಿ ಕೂತಿದ್ದಾರೆ.
ಸದ್ಯ ಜನರು ಹೆದ್ದಾರಿಯಲ್ಲಿಯೇ ಶಾಮಿಯಾನ ಹಾಕಿ ಧರಣಿ ಕುಳಿತಿದ್ದು ಗ್ರಾಮಸ್ಥರಿಗೆ ರೈತ ಸಂಘವೂ ಸಾಥ್ ನೀಡಿದೆ. ಇದರಿಂದಾಗಿ ಕಿಲೋಮೀಟರ್ಗಟ್ಟಲೇ ಸಾಲುಗಟ್ಟಿ ವಾಹನಗಳು ನಿಂತಿವೆ.
ಪ್ರತಿಭಟನಾಕಾರರಿಂದಾಗಿ ಬೇಸತ್ತ ಪ್ರಯಾಣಿಕರು ಅವರೊಂದಿಗೆ ವಾಗ್ವಾದ ಮಾಡಿದ್ದಾರೆ. ಪ್ರತಿಭಟನಾಕಾರರ ಜತೆ ಮಹಿಳೆಯೊಬ್ಬರು ವಾಗ್ವಾದಕ್ಕೆ ಇಳಿದಿದ್ದು ರಸ್ತೆಯಲ್ಲಿ ಹೋಗಲು ಬಿಡುವಂತೆ ಪಟ್ಟು ಹಿಡಿದರು. ಈ ಸಂದರ್ಭ ಆಕೆಯ ಮನವೊಲಿಸಲು ಪ್ರತಿಭಾಟನಾಕಾರರು 'ದಯವಿಟ್ಟು ಅರ್ಥ ಮಾಡಿಕೊಳ್ಳಿ, ಜನರ ಅನುಕೂಲಕ್ಕಾಗಿ ಈ ಪ್ರತಿಭಟನೆ' ಎಂದಿದ್ದಾರೆ.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್, 'ಅಂಡರ್ ಪಾಸ್ ನಿರ್ಮಾಣಕ್ಕೆ ಕಳೆದ ಡಿಸೆಂಬರ್ನಲ್ಲೇ ಮನವಿ ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ತಕ್ಷಣ ಕೆಲಸ ಆರಂಭಿಸಲಾಗುವುದು' ಎಂದಿದ್ದು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿರುವ ಪತ್ರವನ್ನು ಎಂಜಿನಿಯರ್ ತೋರಿಸಿದ್ದಾರೆ.
ಎಂಜಿನಿಯರ್ ತಂದಿದ್ದ ಪತ್ರವನ್ನು ಹರಿದ ಪ್ರತಿಭಟನಾಕಾರರು 'ಹಲವು ತಿಂಗಳಿನಿಂದಲೂ ಇದೇ ಕಾರಣ ಕೊಡುತ್ತಾ ಬಂದಿದ್ದೀರಿ. ಈಗಲೂ ಹಳೆ ಲೆಟರ್ ಹಿಡಿದು ಬಂದಿದ್ದೀರಿ, ಈ ಪತ್ರಕ್ಕೆ ಯಾವುದೇ ಮಹತ್ವ ಇಲ್ಲ. ತತಕ್ಷಣ ಅಂಡರ್ ಪಾಸ್ ನಿರ್ಮಾಣ ಆರಂಭಿಸಿ. ನಿಮಗೆ ಯಾವುದೇ ಕಿರೀಟ ಹಾಕಿಲ್ಲ, ನೀವು ಜನಸೇವಕರು. ಅಹಂಕಾರ ಬಿಟ್ಟು ಕೆಲಸ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಎಂಜಿನಿಯರ್ಗೆ ತಾಕೀತು ಮಾಡಿದ್ದಾರೆ.