ಒಪಿಎಸ್' ಪಿಂಚಣಿ ಜಾರಿಗೆ ಒತ್ತಾಯ

ಮಡಿಕೇರಿ: 'ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಬದಲಾಗಿ 'ಹಳೆ ಪಿಂಚಣಿ ಯೋಜನೆ' (ಒಪಿಎಸ್)ಯನ್ನೇ ಮುಂದುವರಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ನಡೆಸಲಾಗಿದೆ' ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕೊಡಗು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
'ಈ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮತ್ತೊಮ್ಮೆ ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸಿದಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಯಾಗಬಹುದು' ಎಂದೂ ಹೇಳಿದರು.
'ಸರ್ಕಾರಿ ನೌಕರರು ನೆಮ್ಮದಿಯಿಂದ ನಿವೃತ್ತಿ ಜೀವನ ನಡೆಸಬೇಕು. ಇದಕ್ಕಾಗಿ ಹಿಂದೆ ಸರ್ಕಾರಿ ನೌಕರರಿಗೆ ಇದ್ದ ಹಳೆ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು. ಆದ್ದರಿಂದ ಎನ್‍ಪಿಎಸ್ ಬದಲಾಗಿ ಒಪಿಎಸ್ ಜಾರಿಯಾಗಬೇಕು' ಎಂದು ತಿಳಿಸಿದರು.
'ಸರ್ಕಾರಿ ನೌಕರರು ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ. ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಒಂದು ರೀತಿಯ ಕ್ರಿಯಾಶೀಲ ಚಟುವಟಿಕೆಗೆ ಸಹಕಾರಿಯಾಗಲಿದೆ' ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಕ್ರೀಡಾ ಜ್ಯೋತಿ ಬೆಳಗಿಸಿ 'ಸರ್ಕಾರಿ ನೌಕರರ ಚಲನಶೀಲತೆಗೆ ಕ್ರೀಡಾಚಟುವಟಿಕೆ ಸಹಕಾರಿಯಾಗಲಿದೆ. ಇದರಿಂದ ಉತ್ಸಾಹ ಹೆಚ್ಚಲಿದೆ' ಎಂದರು.
ಪೌರಾಯುಕ್ತ ವಿಜಯ್ ಮಾತನಾಡಿ 'ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ಫೂರ್ತಿ ಮತ್ತು ಲವಲವಿಕೆ ದೊರೆಯುತ್ತದೆ' ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ ಮಾತನಾಡಿ 'ಎನ್‍ಪಿಎಸ್‍ನಲ್ಲಿ ಅನೇಕ ಗೊಂದಲಗಳಿವೆ. ನಿವೃತ್ತಿ ನಂತರ ನೌಕರರ ಜೀವನ ಕಷ್ಟಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳೂ ಸರ್ಕಾರಿ ನೌಕರರಿಗೆ ಬೆಂಬಲ ನೀಡಬೇಕು' ಎಂದರು.
ಮಡಿಕೇರಿ ನಗರದಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ 40 ಸೆಂಟ್ ಜಾಗ ನೀಡಲಾಗಿದೆ. ಭವನ ನಿರ್ಮಾಣಕ್ಕಾಗಿ ಹೆಚ್ಚಿನ ಅನುದಾನ ನೀಡಬೇಕು ಎಂದೂ ಒತ್ತಾಯಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ಸರ್ಕಾರಿ ನೌಕರರ ಸಂಘದ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಗುರುರಾಜ್, ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಪ್ರದೀಪ್, ಗೌರವ ಅಧ್ಯಕ್ಷ ಶಿವಕುಮಾರ್ ಇದ್ದರು.