ಗಾಲಿ ಜನಾರ್ಧನ್ ರೆಡ್ಡಿಯನ್ನು ಭೇಟಿಯಾದ ಹಿರಿಯೂರಿನ ಸ್ಥಳೀಯ ಅಭ್ಯರ್ಥಿ

ಗಾಲಿ ಜನಾರ್ಧನ್ ರೆಡ್ಡಿಯನ್ನು ಭೇಟಿಯಾದ ಹಿರಿಯೂರಿನ ಸ್ಥಳೀಯ ಅಭ್ಯರ್ಥಿ

ಚಿತ್ರದುರ್ಗ, ಜನವರಿ, 03 : ಮುಂಬರುವ 2023ರ ವಿಧಾನಸಭಾ ಚುನಾವಣೆ ಇನ್ನು ಕೆಲವು ದಿನಗಳು ಉಳಿದಿದ್ದು, ಜಿಲ್ಲೆಯಲ್ಲಿ ಈಗಾಗಲೇ ಚುನಾವಣಾ ಕಾವು ರಂಗೇರುತ್ತಿದೆ. ಹಾಗೆಯೇ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಪಕ್ಷ ರಚನೆ ಮಾಡಿದ್ದು, ರೆಡ್ಡಿ ಪಕ್ಷಕ್ಕೆ ಒಬ್ಬೊಬ್ಬರಾಗಿ ಸೇರುತ್ತಿದ್ದಾರೆ.

ಇತ್ತ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಿ ಎಂದು ಕ್ಷೇತ್ರ ಪ್ರಚಾರದಲ್ಲಿದ್ದ ಗನ್ನಾಯಕನಹಳ್ಳಿ ಎಚ್.ಮಹೇಶ್ ಅವರು ಜನಾರ್ಧನ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ. ಮಹೇಶ್ ಅವರು ತನ್ನ ಕಾರ್ಯಕರ್ತರೊಂದಿಗೆ ಗಂಗಾವತಿಯಲ್ಲಿರುವ ಕೆಆರ್‌ಪಿ ಪಕ್ಷದ ಕಚೇರಿಗೆ ತೆರಳಿ ಜನಾರ್ಧನ್‌ ರೆಡ್ಡಿ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಗೌರವಿಸಿದರು. ಅಲ್ಲದೇ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಹೇಶ್‌ಗೆ ಜನಾರ್ಧನ್‌ ರೆಡ್ಡಿ ಹೇಳಿದ್ದೇನು?

ಈ ಕುರಿತು ಮಾತನಾಡಿರುವ ಜನಾರ್ಧನ್‌ ರೆಡ್ಡಿಯವರು, ಹಿರಿಯೂರು ಕ್ಷೇತ್ರ ಎಂದರೇ ದುಡ್ಡಿನ ಕ್ಷೇತ್ರವಾಗಿದೆ. ದುಡ್ಡು ಇದ್ದವರಿಗೆ ಮಾತ್ರ ಇಲ್ಲಿ ಗೆಲುವು ಸಾಧ್ಯ ಎನ್ನುತ್ತಾರೆ. ನೀವು ನಮ್ಮ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ನಾನು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ ಎಂದು ಸೂಚನೆ ನೀಡಿದ್ದಾರೆ. ಮಹೇಶ್ ಅವರು ನಮ್ಮ ಪಕ್ಷದಿಂದ ಸ್ಪರ್ಧಿಸಿದರೆ, ಇನ್ನು ನಾಲ್ಕೈದು ದಿನಗಳಲ್ಲಿ ಹಿರಿಯೂರು ನಗರಕ್ಕೆ ಬಂದು ನಿಮ್ಮನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತೇನೆ ಎಂದಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಅಲ್ಲದೆ ಚುನಾವಣೆ ವೇಳೆಯಲ್ಲಿ ನಿಮ್ಮ ಪರವಾಗಿ ಪ್ರಚಾರ ಕೂಡ ಕೈಗೊಳ್ಳಲಾಗುವುದು. ಹಾಗೂ ನಿಮ್ಮ ಗೆಲುವಿಗೆ ಸಹಕರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ರೆಡ್ಡಿ ರಾಜಕೀಯ ಆಟ ಶುರು?

ಇನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಗಳ ಮೇಲೆ ಜನಾರ್ಧನ್‌ ರೆಡ್ಡಿ ಕಣ್ಣಿಟ್ಟಿದ್ದಾರೆ. ಈ ಕ್ಷೇತ್ರಗಳಲ್ಲಿ ರೆಡ್ಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆಯಲ್ಲಿದ್ದಾರೆ. ಇದರಿಂದ ಬಿಜೆಪಿಗೆ ಬಾರಿ ಹಿನ್ನಡೆ ಉಂಟಾಗಲಿದ್ದು, ರೆಡ್ಡಿಯ ಹೊಸ ಪಕ್ಷದಿಂದ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು ಕಷ್ಟವಾಗಲಿದೆ ಎನ್ನಬಹುದು.

ಸಭೆ ನಡೆಸಿ ತಿರ್ಮಾನ ಕೈಗೊಳ್ಳಲಾಗುವುದು

ಇನ್ನು ಈ ಕುರಿತು ಮಾತನಾಡಿರುವ ಮಹೇಶ್, ಮಾಜಿ ಸಚಿವ ಜನಾರ್ಧನ್‌ ರೆಡ್ಡಿ ಅವರು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ನನ್ನ ಪ್ರಚಾರ ಕಾರ್ಯದ ಭೇಟಿ, ಕ್ಷೇತ್ರದಲ್ಲಿ ಒಡನಾಟ, ಸಂಘಟನೆ ಇವೆಲ್ಲವೂ ಇತರೆ ಪಕ್ಷಗಳ ನಾಯಕರ ಗಮನಕ್ಕೆ ಹೋಗಿದೆ. ಆದರೆ ನಾನು ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದನ್ನು ನಿರ್ಧಾರ ಮಾಡಿಲ್ಲ. ಇನ್ನಿತರ ಪಕ್ಷಗಳಿಂದ ಆಹ್ವಾನ ಕೂಡ ಬಂದಿದೆ. ಕ್ಷೇತ್ರಕ್ಕೆ ಯಾವುದು ಅನುಕೂಲವಾಗುತ್ತದೆಯೋ ನೋಡಿಕೊಂಡು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆ ಸಭೆ ನಡೆಸಿ ತಿರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

By ಚಿತ್ರದುರ್ಗ ಪ್ರತಿನಿಧಿ Oneindia