ಮೇಖ್ರಿ ವೃತ್ತದಿಂದ ಚಾಲುಕ್ಯ ವೃತ್ತದವರೆಗೆ 4 ಗ್ರೇಡ್‌ ಸೆಪರೇಟರ್‌: BBMP ಟೆಂಡರ್

ಮೇಖ್ರಿ ವೃತ್ತದಿಂದ ಚಾಲುಕ್ಯ ವೃತ್ತದವರೆಗೆ 4 ಗ್ರೇಡ್‌ ಸೆಪರೇಟರ್‌: BBMP ಟೆಂಡರ್

ಬೆಂಗಳೂರು: ಮೇಖ್ರಿ ವೃತ್ತದಿಂದ ಚಾಲುಕ್ಯ ವೃತ್ತದವರೆಗೆ ನಾಲ್ಕು ಗ್ರೇಡ್‌ ಸೆಪರೇಟರ್‌ ನಿರ್ಮಿಸಲು ಸಾಧ್ಯಾಸಾಧ್ಯತೆ ವರದಿ ಹಾಗೂ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಸಲು ಬಿಬಿಎಂಪಿ ಅ.17ರಂದು ಟೆಂಡರ್‌ ಕರೆದಿದೆ. ಇದಕ್ಕಾಗಿ ₹266 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ.

ಮೇಖ್ರಿ ವೃತ್ತದಿಂದ ಕಾವೇರಿ ಚಿತ್ರಮಂದಿರದ ಜಂಕ್ಷನ್‌ವರೆಗೆ ರಸ್ತೆ ವಿಸ್ತರಣೆಗಾಗಿ 58 ಮರಗಳನ್ನು ಕಡಿದು ಹಾಕಲಾಗುತ್ತಿದ್ದು, ಇದಕ್ಕಾಗಿ ಸಾರ್ವಜನಿಕರ ಆಕ್ಷೇಪಣೆಯನ್ನು ಬಿಬಿಎಂಪಿ ಕರೆದಿತ್ತು.

ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಈ ನಡುವೆಯೇ ಚಾಲುಕ್ಯ, ವಿಂಡ್ಸರ್‌, ಕಾವೇರಿ, ಮೇಖ್ರಿ ಜಂಕ್ಷನ್‌ನಲ್ಲಿ ಗ್ರೇಡ್‌ ಸೆಪರೇಟರ್‌ ನಿರ್ಮಿಸಲು ಉದ್ದೇಶಿಸಲಾಗಿದೆ.

'ನಾಲ್ಕು ಜಂಕ್ಷನ್‌ಗಳಲ್ಲಿ ಸಂಚಾರದಟ್ಟಣೆ ಹೆಚ್ಚಾಗಿದೆ. ಇದನ್ನು ಸುಗಮಗೊಳಿಸಬೇಕಿದೆ. ಪ್ರತಿ ಸಮಯದಲ್ಲೂ ಈಜಂಕ್ಷನ್‌ಗಳಲ್ಲಿ ವಾಹನಗಳು ನಿಂತಿರುತ್ತವೆ. ಹೀಗಾಗಿ ನಾವು ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಬಿಬಿಎಂಪಿ ಗ್ರೇಡ್‌ ಸೆಪರೇಟರ್‌ ಯೋಜನೆಯನ್ನು ಅಂತಿಮಗೊಳಿಸಿಲ್ಲ.

ಯೋಜನೆ ಸಿದ್ಧಗೊಂಡ ಮೇಲೆ ಸರ್ಕಾರದ ಅನುಮೋದನೆಯನ್ನು ಕೇಳುತ್ತೇವೆ. ಈ ಟೆಂಡರ್‌ನಲ್ಲಿ ಉದ್ದ ಮೇಲ್ಸೇತುವೆ ಬಗ್ಗೆಯೂ ಸಾಧ್ಯಾಸಾಧ್ಯತೆ ವರದಿಯನ್ನು ನಿರೀಕ್ಷಿಸಲಾಗಿದೆ. ಎಲ್ಲರ ಅಭಿಪ್ರಾಯ ಪಡೆದು ವರದಿ ನೀಡಲು ಹೇಳಲಾಗಿದೆ' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

'ಕಾಂಗ್ರೆಸ್‌ ಸರ್ಕಾರವಿದ್ದಾಗ ಚಾಲುಕ್ಯ ವೃತ್ತದಿಂದ ಮೇಖ್ರಿ ವೃತ್ತದವರೆಗಿನ ಸ್ಟೀಲ್‌ ಬ್ರಿಡ್ಜ್‌ ನಿರ್ಮಿಸಲು ಬಿಜೆಪಿ ಮುಖಂಡರು ವಿರೋಧಿಸಿದ್ದರು. ಇದೀಗ ಅವರದ್ದೇ ಸರ್ಕಾರವಿದ್ದಾಗ ಗ್ರೇಡ್‌ ಸೆಪರೇಟರ್‌ ನಿರ್ಮಿಸಲು ಟೆಂಡರ್‌ ಕರೆದಿದ್ದಾರೆ. ಅವರು ಏನು ನಿರ್ಮಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ' ಎಂದು ಪರಿಸರ ಕಾರ್ಯಕರ್ತ ವಿಜಯ್‌ ನಿಶಾಂತ್‌ ಪ್ರಶ್ನಿಸಿದರು.

ಚಾಲುಕ್ಯ ವೃತ್ತದಿಂದ ಮೇಖ್ರಿ ವೃತ್ತದವರಗೆ ಸ್ಟೀಲ್‌ ಮೇಲ್ಸೇತುವೆ ಬೇಡ ಎಂದು ಬಿಬಿಎಂಪಿಯನ್ನು ಆಗ್ರಹಿಸುವ ಸಹಿ ಸಂಗ್ರಹ ಅಭಿಯಾನವನ್ನೂ ಪರಿಸರಸ್ನೇಹಿ ಸಂಘಗಳು ಆರಂಭಿಸಿವೆ. ನೂರಾರು ಮರಗಳನ್ನು ಕಡಿದು ಹಾಕುವುದು ಬೇಡ ಎಂದು ಒತ್ತಾಯಿಸಿವೆ.