ನಿಗಮ ಮಂಡಳಿಗಳಿಗೆ ನೇಮಕ ಭಾಗ್ಯ, ಪಕ್ಷ ನಿಷ್ಠರಿಗೆ ಮಣೆ

ನಿಗಮ ಮಂಡಳಿಗಳಿಗೆ ನೇಮಕ ಭಾಗ್ಯ, ಪಕ್ಷ ನಿಷ್ಠರಿಗೆ ಮಣೆ

ಬೆಂಗಳೂರು,ಅ.18- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯ ದೊಳಗೆ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಗೆ ಕೊನೆಗೂ ಅಂಕಿತ ಬೀಳಲಿದೆ. ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಿಕೆಯಾಗಿ ಆಕಾಂಕ್ಷಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ನಿರಾಸೆ ಉಂಟಾಗಿತ್ತು. ಇದೀಗ 45 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಲಿದ್ದಾರೆ.

ಸಂಘ ಪರಿವಾರ ಮತ್ತು ಪಕ್ಷದ ವರಿಷ್ಠರು ಬಿಜೆಪಿ ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಬೇಕೆಂದು ಸೂಚನೆ ನೀಡಿರುವುದರಿಂದ ಬಹುತೇಕ ಪಕ್ಷ ನಿಷ್ಠರಿಗೆ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ಭಾನುವಾರದೊಳಗೆ ಅಂದಾಜು 45 ನಿಗಮಮಂಡಳಿಗಳಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ.

ಈ ಕುರಿತು ಈಗಾಗಲೇ ಕೆಲವರಿಂದ ಅಗತ್ಯ ಮಾಹಿತಿ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ ಸಿಎಂ ಬೊಮ್ಮಾಯಿ ಅವರು ಆರ್‍ಎಸ್‍ಎಸ್ ನಾಯಕರು ಮತ್ತು ಪಕ್ಷದ ವರಿಷ್ಠರನ್ನು ಭೇಟಿಯಾದ ಸಂದರ್ಭದಲ್ಲಿ ಕಡೆಪಕ್ಷ ನಿಗಮ ಮಂಡಳಿಗಾದರೂ ಅಧ್ಯಕ್ಷರನ್ನು ನೇಮಕ ಮಾಡಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಪಕ್ಷಕ್ಕಾಗಿ ದುಡಿದವರನ್ನು ಹಾಗೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಲವರಿಗೆ ಇಲ್ಲಿ ಸ್ಥಾನ ನೀಡುವ ಮೂಲಕ ಮುಂದೆ ಉಂಟಾಗಬಹುದಾದ ಭಿನ್ನಮತ ತಡೆಯುವುದು ಇದರ ಉದ್ದೇಶವಾಗಿತ್ತು.

ಈಗ ಅನುಮತಿ ನೀಡಿರುವುದರಿಂದ ಸಾಕಷ್ಟು ಅಳೆದು ತೂಗಿ 45 ನಿಗಮಗಳಿಗೆ ನೇಮಕ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಎರಡು ವರ್ಷ ಅಧಿಕಾರ ಪೂರೈಸಿರುವವರನ್ನು ತೆಗೆದು ಹಾಕಲಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಬಹುತೇಕ ಅವರ ಹಿಂಬಾಲಕರಿಗೆ ನಿಗಮದಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಇದು ಸಹಜವಾಗಿ ಪಕ್ಷಕ್ಕೆ ಹಲವು ವರ್ಷಗಳಿಂದ ದುಡಿದವರು ಸ್ಥಾನಮಾನ ಸಿಗದಿರುವುದಕ್ಕೆ ಮುನಿಸಿಕೊಳ್ಳುವಂತೆ ಮಾಡಿತ್ತು.

ಬೆರಳೆಣಿಕೆಯಷ್ಟು ನಿಷ್ಠರಿಗೆ ಸ್ಥಾನ ಕಲ್ಪಿಸಲಾಗಿತ್ತಾದರೂ ಅವು ಗಂಜಿ ಕೇಂದ್ರದಂತಿದ್ದವು. ಅಂದರೆ ಆ ನಿಗಮಗಳಿಗೆ ಅಗತ್ಯವಾದ ಅನುದಾನ, ಆರ್ಥಿಕ ನೆರವು, ಸಿಬ್ಬಂದಿ ನೇಮಕ ಯಾವುದೂ ಇರಲಿಲ್ಲ. ಇದು ಒಂದು ರೀತಿ ಕೊಟ್ಟು ಕಿತ್ತುಕೊಂಡರು ಎಂಬಂತಿತ್ತು.

ವಿಧಾನಸಭೆ ಚುನಾವಣೆ ಇನ್ನೇನು ಸಮೀಪಿಸುತ್ತಿರುವುದರಿಂದ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿದರೆ ಒಳ ಹೊಡೆತ ಬೀಳುವುದು ಖಚಿತ ಎಂಬ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನೇ ನಿಗಮ ಮಂಡಳಿಗೆ ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾವುದೇ ಲಾಭಿ, ಒತ್ತಡಕ್ಕೆ ಮಣಿಯದೆ ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಸ್ಥಾನಮಾನ ನೀಡಬೇಕೆಂದು ವರಿಷ್ಠರು ಸೂಚನೆ ಕೊಟ್ಟಿದ್ದರು. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಭಾನುವಾರದೊಳಗೆ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಗೆ ಮುಖ್ಯಮಂತ್ರಿಯವರ ಅಂಕಿತ ಬೀಳುವುದು ಖಚಿತ ಎನ್ನಲಾಗಿದೆ.