ಕುತೂಹಲ ಕೆರಳಿಸಿದೆ ಬಾಲಚಂದ್ರ ಜಾರಕಿಹೊಳಿ- ಹೆಚ್ಡಿಕೆ ಮಾತುಕತೆ

ಬೆಂಗಳೂರು,ನ.9 ; ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಆಡಳಿತಾರೂಢ ಬಿಜೆಪಿಯ ಶಾಸಕ ಬಾಲಚಂದ್ರ ಜಾರಕೊಹೊಳಿ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.
KMF ಅಧ್ಯಕ್ಷರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಕುಮಾರಸ್ವಾಮಿ ಅವರು ಈಗಾಗಲೇ ಎರಡು-ಮೂರು ಸುತ್ತಿನ ಮಾತುಕತೆ ನಡೆಸಿದ್ದು, ಯಾವ ರಾಜಕೀಯ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿ ಉಳಿದಿದೆ. ಬಾಲಚಂದ್ರ ಜಾರಕಿಹೊಳಿ ಮರಳಿ ಜೆಡಿಎಸ್‍ಗೆ ಬರುತ್ತಾರೆಯೇ ಅಥವಾ ಬಿಜೆಪಿಯಲ್ಲೆ ಉಳಿಯಲಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಆದರೆ, ಜಾರಕಿಹೊಳಿ ಅವರು ಕುಮಾರಸ್ವಾಮಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಸಧ್ಯಕ್ಕೆ ನಿರ್ಧರಿಸಲಾಗದು. ಆಡಳಿತಾರೂಢ ಬಿಜೆಪಿ ಬಗ್ಗೆ ಜಾರಕಿಹೊಳಿ ಅವರ ಕುಟುಂಬದವರಲ್ಲಿ ತೀವ್ರ ಅಸಮಾಧಾನವಿದೆ ಎಂದು ಜೆಡಿಎಸ್ ಮೂಲಗಳು ಹೇಳಿವೆ.
ಮರಳಿ ಸಚಿವ ಸ್ಥಾನ ನೀಡದಿರುವುದಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಬಗ್ಗೆ ಬೇಸರಗೊಂಡಿದ್ದಾರೆ. ಸಂಪುಟದಲ್ಲಿ ಸಚಿವ ಸ್ಥಾನಗಳು ಖಾಲಿ ಇದ್ದರೂ ಒಂದಲ್ಲ ಒಂದು ನೆಪವೊಡ್ಡಿ ಮುಂದೂಡುತ್ತಿರುವ ಕುರಿತು ತೀವ್ರ ಅಸಮಾಧಾಗೊಂಡಿದ್ದಾರೆ.
ಮೊದಲ ಬಾರಿಗೆ ಜೆಡಿಎಸ್‍ನಿಂದ ಶಾಸಕರಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರು, ಮತ್ತೆ ಜೆಡಿಎಸ್‍ಗೆ ಮರಳುತ್ತಾರೆಯೇ ಅಥವಾ ಬಿಜೆಪಿಯಲ್ಲೇ ಉಳಿಯಲ್ಲಿದ್ದಾರೆಯೇ ಎಂಬ ಬಗ್ಗೆ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಬೇಕು ಎಂಬ ಗುರಿ ಹೊಂದಿರುವ ಜೆಡಿಎಸ್ ನಾಯಕರು, ಪ್ರಭಾವಿ ನಾಯಕರನ್ನು ಮರಳಿ ಪಕ್ಷಕ್ಕೆ ಕರೆತರುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.
ಈ ನಡುವೆ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿಪ್ ಉಲ್ಲಂಸಿದ ಆರೋಪದ ಮೇಲೆ ಜೆಡಿಎಸ್‍ನಿಂದ ಉಚ್ಛಾಟಿತರಾಗಿದ್ದ ಗುಬ್ಬಿ ಶಾಸಕ ಶ್ರೀನಿವಾಸ್ ಅವರನ್ನು ಮಾಜಿ ಸಚಿವ ಸಾ.ರಾ.ಮಹೇಶ್ ಭೇಟಿಯಾಗಿರುವುದು ಈ ವಿಚಾರಕ್ಕೆ ಮತ್ತಷ್ಟು ಇಂಬುಕೊಟ್ಟಂತಾಗಿದೆ.
ಪಕ್ಷದಿಂದ ಉಚ್ಛಾಟನೆ ಮಾಡಿದ ಸಂದರ್ಭದಲ್ಲಿ ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಶ್ರೀನಿವಾಸ್ ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಜೆಡಿಎಸ್ ಮತ್ತು ಶ್ರೀನಿವಾಸ್ ನಡುವಿನ ಸಂಬಂಧ ಸರಿಪಡಿಸಲಾಗದಂತಹ ಸ್ಥಿತಿ ತಲುಪಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಹಲವು ರೀತಿಯ ರಾಜಕೀಯ ಬದಲಾವಣೆಗಳಾಗುತ್ತಿದ್ದು, ಶ್ರೀನಿವಾಸ್ ಜೆಡಿಎಸ್‍ನಲ್ಲೇ ಉಳಿಯಲಿದ್ದಾರೆಯೇ ಎಂಬ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ನಂತರ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಜಿ.ಟಿ.ದೇವೇಗೌಡರು ತಮ್ಮ ನಿಲುವು ಬದಲಿಸಿ ಈಗಾಗಲೇ ಜೆಡಿಎಸ್‍ನಲ್ಲೆ ಉಳಿಯುವ ನಿರ್ಧಾರ ಕೈಗೊಂಡಿದ್ದಾರೆ.
ಇದೇ ರೀತಿ ಪಕ್ಷದ ತೊರೆಯಲು ಮುಂದಾಗಿದ್ದವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಹಾಗೂ ಪಕ್ಷ ತೊರೆದಿದ್ದ ಪ್ರಭಾವಿ ಮುಖಂಡರನ್ನು ಮರಳಿ ಕರೆತರುವ ಪ್ರಯತ್ನದಲ್ಲಿ ಜೆಡಿಎಸ್ ನಾಯಕರು ಮುಂದಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.