ಅಫ್ಘಾನ್ ಬಿಕ್ಕಟ್ಟು: 26ರಂದು ಸರ್ವ ಪಕ್ಷ ಸಭೆ

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಉದ್ಭವವಾಗಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆಗೆ ಕರೆ ನೀಡಿದೆ. ಈ ತಿಂಗಳ 26ರಂದು ಸಭೆ ನಡೆಯಲಿದೆ.
ಅಫ್ಘಾನಿಸ್ತಾನದ ಪರಿಸ್ಥಿತಿ, ಭಾರತ ಅನುಸರಿಸಬೇಕಾದ ನಿಲುವಿನ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನಲ್ಲಿನ ಬೆಳವಣಿಗೆಗಳನ್ನು ರಾಜಕೀಯ ಪಕ್ಷಗಳಿಗೆ ವಿವರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಾಂಗ ಸಚಿವಾಲಯಕ್ಕೆ ಸೂಚಿಸಿದ್ದಾರೆ. ಈ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈ ಶಂಕರ್ ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ತಾಲಿಬಾನ್ ಆಕ್ರಮಣದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಿಂದ ಎಲ್ಲಾ ದೇಶಗಳು ತಮ್ಮ ರಾಜತಾಂತ್ರಿಕ ಸಿಬ್ಬಂದಿ ಹಾಗೂ ನಾಗರಿಕರನ್ನು ಸ್ಥಳಾಂತರಿಸುತ್ತಿವೆ. ಭಾರತ ಕೂಡ ಆ ದೇಶದಿಂದ ವಿಮಾನಗಳ ಮೂಲಕ ಸ್ಥಳಾಂತರ ಪ್ರಕ್ರಿಯೆ ನಡೆಸುತ್ತಿದೆ. ಆಗಸ್ಟ್ 16 ರಂದು ಆರಂಭಗೊಂಡ ಸ್ಥಳಾಂತರ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.