ಉದ್ಘಾಟನೆಗೊಂಡ ಕೆಲವೇ ಗಂಟೆಗಳಲ್ಲಿ ಗಾಂಧಿ ಪ್ರತಿಮೆ ಧ್ವಂಸ; ನಾಚಿಕೆಗೇಡು ಎಂದ ಆಸ್ಟ್ರೇಲಿಯಾ ಪ್ರಧಾನಿ

ಉದ್ಘಾಟನೆಗೊಂಡ ಕೆಲವೇ ಗಂಟೆಗಳಲ್ಲಿ ಗಾಂಧಿ ಪ್ರತಿಮೆ ಧ್ವಂಸ; ನಾಚಿಕೆಗೇಡು ಎಂದ ಆಸ್ಟ್ರೇಲಿಯಾ ಪ್ರಧಾನಿ

ಸಿಡ್ನಿ, ನವೆಂಬರ್ 16: ಭಾರತ ಸರ್ಕಾರವು ಆಸ್ಟ್ರೇಲಿಯಾಕ್ಕೆ ಉಡುಗೊರೆಯಾಗಿ ನೀಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬೃಹತ್ ಗಾತ್ರದ ಕಂಚಿನ ಪ್ರತಿಮೆಯನ್ನು ಮೆಲ್ಬೋರ್ನ್​ ನಗರದಲ್ಲಿ ಧ್ವಂಸಗೊಳಿಸಲಾಗಿದೆ.

ಈ ಘಟನೆಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಬೇಸರ ವ್ಯಕ್ತಪಡಿಸಿದ್ದು, ಇದು ತೀರಾ 'ಅವಮಾನಕರ' ಎಂದು ಖಂಡಿಸಿದ್ದಾರೆ.

ಇದರಿಂದ ಭಾರತ-ಆಸ್ಟ್ರೇಲಿಯನ್ ಸಮುದಾಯದಲ್ಲಿ ಬೇಸರ ಮೂಡಿಸಿದೆ.

ಭಾರತದ 75 ವರ್ಷಗಳ ಸ್ವಾತಂತ್ರ್ಯದ ಆಚರಣೆಯ ಅಂಗವಾಗಿ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರು ಭಾರತದ ಕಾನ್ಸುಲ್ ಜನರಲ್ ರಾಜ್‌ಕುಮಾರ್ ಮತ್ತು ಇತರ ಆಸ್ಟ್ರೇಲಿಯಾದ ನಾಯಕರೊಂದಿಗೆ ಶುಕ್ರವಾರ ರೌವಿಲ್ಲೆಯಲ್ಲಿರುವ ಆಸ್ಟ್ರೇಲಿಯಾದ ಭಾರತೀಯ ಸಮುದಾಯ ಕೇಂದ್ರದಲ್ಲಿ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.

ಗಾಂಧೀಜಿಗೆ ಈ ರೀತಿಯ ಅಗೌರವ ತೋರಿರುವುದು ಬಹಳ ಅವಮಾನಕರ ಮತ್ತು ಅತ್ಯಂತ ನಿರಾಶಾದಾಯಕವಾಗಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಬೇಸರ ವ್ಯಕ್ತಪಡಿಸಿದ್ದಾರೆ. ವಿಶ್ವದಲ್ಲೇ ಅತ್ಯಂತ ಬಹುಸಂಸ್ಕೃತಿ ಮತ್ತು ವಲಸಿಗರು ಹೆಚ್ಚಾಗಿರುವ ರಾಷ್ಟ್ರವಾಗಿರುವ ಆಸ್ಟ್ರೇಲಿಯಾದಲ್ಲಿ ಸಾಂಸ್ಕೃತಿಕ ಸ್ಮಾರಕಗಳ ಮೇಲಿನ ದಾಳಿಯನ್ನು ಎಂದಿಗೂ ಸಹಿಸಲಾಗದು ಎಂದು ಅವರು ಹೇಳಿದ್ದಾರೆ.

ಹಾಗೆಯೇ, ಈ ಘಟನೆಗೆ ಕಾರಣರಾದವರು ಆಸ್ಟ್ರೇಲಿಯನ್- ಭಾರತೀಯ ಸಮುದಾಯಕ್ಕೆ ಅಗೌರವ ತೋರಿದ್ದಾರೆ. ಇದರಿಂದ ದೇಶವೇ ತಲೆ ತಗ್ಗಿಸುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಗಾಂಧಿ ಪ್ರತಿಮೆಯನ್ನು ಭಾರತ ಸರ್ಕಾರ ಉಡುಗೊರೆಯಾಗಿ ನೀಡಿತ್ತು. ಈ ಘಟನೆಯಿಂದ ಭಾರತೀಯ ಸಮುದಾಯವು ತುಂಬಾ ಆಘಾತಕ್ಕೊಳಗಾಗಿದೆ ಮತ್ತು ದುಃಖಕ್ಕೊಳಗಾಗಿದೆ. ಜನರು ಇಂತಹ ಕೀಳು ವಿಧ್ವಂಸಕ ಕೃತ್ಯವನ್ನು ಏಕೆ ಮಾಡುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ವಿಕ್ಟೋರಿಯಾದ ಭಾರತೀಯ ಸಂಘಗಳ ಒಕ್ಕೂಟದ ಅಧ್ಯಕ್ಷ ಸೂರ್ಯ ಪ್ರಕಾಶ್ ಸೋನಿ ಅಸಮಾಧಾನ ಹೊರಹಾಕಿದ್ದಾರೆ.

ರೋವಿಲ್ಲೆ ಕೇಂದ್ರವು ವಿಕ್ಟೋರಿಯಾ ರಾಜ್ಯದಲ್ಲಿ ಮೊದಲ ಭಾರತೀಯ ಸಮುದಾಯ ಕೇಂದ್ರವಾಗಿದೆ ಮತ್ತು 30 ವರ್ಷಗಳ ಪ್ರಯತ್ನದ ನಂತರ ಗಾಂಧಿ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಈ ಬಗ್ಗೆ ಆಸ್ಟ್ರೇಲಿಯಾ ಇಂಡಿಯಾ ಕಮ್ಯುನಿಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಾಸನ್ ಶ್ರೀನಿವಾಸನ್ ಮಾತನಾಡಿ, ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದ 24 ಗಂಟೆಗಳಲ್ಲಿ ಯಾರೋ ಒಬ್ಬರು ಅದನ್ನು ಧ್ವಂಸಗೊಳಿಸಲು ಪ್ರಯತ್ನಿಸಿರುವುದು ನನಗೆ ಬೇಸರ ತಂದಿದೆ. ಅವರು ಗಾಂಧೀಜಿ ಪ್ರತಿಮೆಯ ತಲೆಯ ಭಾಗಕ್ಕೆ ಹಾನಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳಿದರು.

ವಿಕ್ಟೋರಿಯಾ ರಾಜ್ಯದಲ್ಲಿ ಸುಮಾರು 3,00,000 ಭಾರತೀಯರು ವಾಸಿಸುತ್ತಿದ್ದಾರೆ ಮತ್ತು "ವಿಕ್ಟೋರಿಯಾದಲ್ಲಿ ಇದು ಸಂಭವಿಸುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದರು.