ಕಪಾಳಕ್ಕೆ ಹೊಡೆಯಲೆಂದೇ ಮಹಿಳೆಯನ್ನು ನೇಮಿಸಿಕೊಂಡ ವ್ಯಕ್ತಿ: ಗಂಟೆ ಲೆಕ್ಕದಲ್ಲಿ ಸಂಬಳ ನೀಡ್ತಾನೆ!
ಆಕೆಯ ಕೆಲಸ ಏನೆಂದರೆ ಈತ ತನ್ನ ಕೆಲಸದ ಮಧ್ಯೆ ಪ್ರತಿ ಬಾರಿ ಫೇಸ್‌ಬುಕ್ ಆಯಪ್ (Facebook App) ಓಪನ್ ಮಾಡಿದಾಗಲೆಲ್ಲಾ ಅವನಿಗೆ ಕಪಾಳಮೋಕ್ಷ (Slapper) ಮಾಡೋದು. ಈ ವಿಷಯವನ್ನು ಮನೀಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ (Twitter) ಹಂಚಿಕೊಂಡಿದ್ದರು. ವಿಶೇಷ ಅಂದ್ರೆ ಇದಕ್ಕೆ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕೂಡಾ ರಿಯಾಕ್ಟ್ ಮಾಡಿದ್ದಾರೆ.
ಅಂದಹಾಗೆ ಮನೀಶ್ ಈ ಟ್ವೀಟ್ ಮಾಡಿದ್ದು 2012ರಲ್ಲಿ. ಆದರೆ ಯಾವಾಗ ಎಲಾನ್ ಮಸ್ಕ್ ಇದಕ್ಕೆ ರಿಯಾಕ್ಟ್ ಮಾಡಿದರೋ, ಆಗಿನಿಂದ ಅಂದರೆ, ಸುಮಾರು 9 ವರ್ಷಗಳ ನಂತರ ಟೆಸ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ವೀಟ್ ವೈರಲ್ ಆಗುತ್ತಿದೆ.
ವಾಣಿಜ್ಯೋದ್ಯಮಿ ಮನೀಶ್ ಸೇಥಿ ಫೇಸ್‌ಬುಕ್ ಆಯಪ್ ಓಪನ್ ಮಾಡಿದಾಗಲೆಲ್ಲಾ ಕಪಾಳಮೋಕ್ಷ ಮಾಡುವ ಈ "ಸ್ಲ್ಯಾಪರ್" ಮಹಿಳೆ, ಈಗ ಕೆನ್ನೆಗೆ ಹೊಡೆಯುವ ಸುದ್ದಿಯ ಮೂಲಕ, ಸಾಕಷ್ಟು ಸದ್ದು ಮಾಡುತ್ತಿದ್ದಾರೆ.
ಗಂಟೆಗೆ 8 ಡಾಲರ್ ಸಂಬಳ
ಮನೀಶ್ ಸೇಥಿ, ಕಾರಾ ಎಂಬ ಮಹಿಳೆಗೆ ಈ ಕೆಲಸಕ್ಕೆ ಗಂಟೆಗೆ 8 ಡಾಲರ್ ಸಂಬಳ ಕೊಡುತ್ತಿದ್ದಾರೆ. ಈಕೆಯ ಕೆಲಸ ಅಂದ್ರೆ ಮನೀಶ್ ಕೆಲಸ ಮಾಡೋ ಕಂಪ್ಯೂಟರ್ ಪರದೆ ನೋಡೋದು ಮತ್ತು ಆತ ಫೇಸ್‌ಬುಕ್ಕಿಗೆ ಹೋದರೆ ಅವನಿಗೆ ವಾರ್ನಿಂಗ್ ಕೊಡೋದು, ಮಾತು ಕೇಳದಿದ್ದರೆ ಕಪಾಳಮೋಕ್ಷ ಮಾಡೋದು.
ವಿಶೇಷ ಅಂದ್ರೆ, ಸೇಥಿ ಫೇಸ್‌ಬುಕ್ಕಿಗೆ ಹೋದಾಗ ಕಪಾಳಮೋಕ್ಷ ಮಾಡುವ ಮೂಲಕ, ಕಾರಾ ಮನೀಶ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದಾರಂತೆ. "ನಾರ್ಮಲ್ ದಿನಗಳಲ್ಲಿ ನನ್ನ ಸರಾಸರಿ ಕಾರ್ಯಕ್ಷಮತೆ ಸುಮಾರು 35-40% ರಷ್ಟಿರುತ್ತದೆ. ಆದರೆ, ಕಾರಾ ನನ್ನ ಪಕ್ಕದಲ್ಲಿ ಕುಳಿತಾಗ, ಅದು 98%ಗೆ ಏರುತ್ತದೆ "ಎಂದು ಮನೀಶ್ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಆದರೆ ಇದು 2012ರ ವಿಷಯ. ಈಗ ಈ ಕೆಲಸಕ್ಕೆ ಅಂತ ಸ್ಮಾರ್ಟ್ ವಾಚ್ ಮತ್ತು ವೇರಬಲ್ ಡಿವೈಸ್‌ಗಳು ಬಂದಿವೆ. ಅಂಥಹ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ನಿಟ್ಟಿನಲ್ಲಿ ಸ್ವತಃ ಮನೀಶ್ ಸೇಥಿ ಅವರೇ ಸಾಕಷ್ಟು ಕೆಲಸ ಮಾಡಿದ್ದಾರೆ.
ಈ ಟ್ವೀಟ್ ಬಗ್ಗೆ ನೆಟ್ಟಿಗರು ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಕೆಲಸಕ್ಕೆ ನಾನು ಬರಬಹುದಾ ಅಂತ ಕೆಲವರ ಪ್ರಶ್ನೆ ಸಹ ಮಾಡಿದ್ದಾರೆ. ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟ್ರೋಲ್ ಪೇಜ್ ಗಳಲ್ಲಿ ಹರಿದಾಡುತ್ತಿವೆ.
ಅಂದಹಾಗೆ, ಅಂದು, ಫೇಸ್ ಬುಕ್ ಓಪನ್ ಮಾಡಿದ್ರೆ ಒದೆ ಬೀಳಬಹುದು ಅನ್ನೋ ಭಯದಲ್ಲೋ ಏನೋ, ಮನೀಷ್ ಈ ವಿಷಯವನ್ನು ಹಂಚಿಕೊಳ್ಳಲು ಬಳಸಿದ್ದು ಟ್ವಿಟ್ಟರ್ ಅನ್ನು. ಆದರೆ, ಟ್ವಿಟ್ಟರ್ ಓಪನ್ ಮಾಡಿದ್ರೆ ಕೆನ್ನೆಗೆ ಹೊಡೆಯೋಕೆ ಅಂತ ಅವರು ಯಾರನ್ನೂ ನೇಮಿಸಿಕೊಂಡ ಬಗ್ಗೆ ಸುದ್ದಿ ಬಂದಿಲ್ಲ!