ಸತ್ತರೂ ಅಫ್ಘಾನಿಸ್ಥಾನ ಬಿಟ್ಟು ಹೋಗುವುದಿಲ್ಲ ಎಂದ ಸ್ವಯಂ ಘೋಷಿತ ಅದ್ಯಕ್ಷ ಅಮರುಲ್ಲಾ
ಕಾಬೂಲ್: ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ, ದೇಹ ಇಲ್ಲೇ ಮಣ್ಣಾದರೂ ಸೈ ಎಂದು ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಟ್ವೀಟ್ ಮಾಡಿದ್ದಾರೆ.ಅಂದ್ರಾಬ್ ಪ್ರಾಂತ್ಯದಲ್ಲಿ ಉಗ್ರರಿಂದ ಮನೆ ಮನೆ ಶೋಧವಾಗುತ್ತಿದೆ. ಈ ಹೊತ್ತಿನಲ್ಲೇ ಅಫ್ಘಾನ್‍ನ ಮಾಜಿ ಉಪಾಧ್ಯಕ್ಷ, ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಟ್ವೀಟ್ ಮಾಡಿ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ. ದೇವರಿಗೆ ಮಾತ್ರ ನನ್ನನ್ನು ಇಲ್ಲಿಂದ ತೆರವುಗೊಳಿಸಲು ಸಾಧ್ಯ. ಆದರೆ ನನ್ನ ದೇಹ ಈ ಮಣ್ಣಿನಲ್ಲಿ ಐಕ್ಯವಾಗುತ್ತದೆ. ಅಫ್ಘಾನಿಸ್ತಾನ ಮತ್ತು ನಾನು ಒಂದೇ. ಇಲ್ಲಿಂದ ಹೊರದಬ್ಬಲು ಯಾರಿಂದಲೂ ಆಗದು, ನಾನು ಕೂಡಾ ಹೊರಗೆ ಹೋಗಲಾರೆ. ಈ ಮಣ್ಣಿನಲ್ಲೇ ನನ್ನ ದೇಹ ಮಣ್ಣಾಗಿ ಹೋಗಲಿ ಎನ್ನುವ ಮೂಲಕ ಉಗ್ರರಿಗೆ ಹೆದರುವುದಿಲ್ಲ ಎಂಬ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. ಅಫ್ಘಾನಿಸ್ತಾನದ ಉಪಾಧ್ಯಕ್ಷರಾಗಿದ್ದ ಅಮರುಲ್ಲಾ ಸಲೇಹ್ ಕೆಲ ದಿನಗಳ ಹಿಂದಷ್ಟೇ ನಾನೀಗ ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದರು.