ಬೆಂಗಳೂರು: ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ರಕ್ತದಾನ ಮಾಡಿದ 75 ಪೊಲೀಸರು

ಬೆಂಗಳೂರು: ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ನಗರದ ಪಶ್ಚಿಮ ವಿಭಾಗದ ಪೊಲೀಸರು ಶುಕ್ರವಾರ ರಕ್ತದಾನ ಮಾಡಿದರು.
ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಅವರ ಉಪ್ಪಾರಪೇಟೆಯಲ್ಲಿರುವ ಕಚೇರಿಯಲ್ಲಿ 'ಲಯನ್ಸ್ ರಕ್ತ ನಿಧಿ' ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 75 ಪೊಲೀಸರು ರಕ್ತ ನೀಡಿದರು.
ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ರಕ್ತದ ಅಗತ್ಯವಿದೆ. ಹೀಗಾಗಿ, ರಕ್ತದಾನ ಮಾಡುವಂತೆ ಆಸ್ಪತ್ರೆಯವರು ಕೋರಿದ್ದರು. ಅದಕ್ಕೆ ಸ್ಪಂದಿಸಿದ ಪಶ್ಚಿಮ ವಿಭಾಗದ ಪೊಲೀಸರು, ಕೆಲಸದ ಒತ್ತಡದ ನಡುವೆಯೇ ರಕ್ತದಾನ ಮಾಡಿದ್ದಾರೆ. ಇವರ ಕೆಲಸಕ್ಕೆ ಕಮಿನರ್ ಕಮಲ್ ಪಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ಈ ಶಿಬಿರ ಆಯೋಜಿಸಲಾಗಿತ್ತು. ವಿಭಾಗದ ಹಲವು ಠಾಣೆಗಳ ಇನ್‌ಸ್ಪೆಕ್ಟರ್, ಪಿಎಸ್‌ಐ, ಎಎಸ್‌ಐ, ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್ ಸೇರಿ 75 ಪೊಲೀಸರು ಸ್ವಯಂಪ್ರೇರಿತವಾಗಿ ಬಂದು ರಕ್ತದಾನ ಮಾಡಿದ್ದಾರೆ' ಎಂದು ಸಂಜೀವ್ ಪಾಟೀಲ ತಿಳಿಸಿದರು.