ಸುದೀಪ್, ಯಶ್ ಜೊತೆ ಪೈಪೋಟಿಗೆ ಬಿದ್ರಾ ಧ್ರುವ ಸರ್ಜಾ? ಈ ಪ್ರಶ್ನೆಗೆ ಆಕ್ಷನ್ ಪ್ರಿನ್ಸ್ ಹೇಳಿದ್ದೇನು?
ಇಂದು (ಫೆಬ್ರವರಿ 23) ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಟೀಸರ್ ರಿಲೀಸ್ ಆಗಿದೆ. ಐದು ಭಾಷೆಗಳ ಮಾಧ್ಯಮಗಳ ಸಮ್ಮುಖದಲ್ಲಿ ಈ ಜಬರ್ದಸ್ತ್ ಆಕ್ಷನ್ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. ಈ ವೇಳೆ ಧ್ರುವ ಸರ್ಜಾಗೆ ಹಲವು ಪ್ರಶ್ನೆಗಳು ಎದುರಾಗಿದ್ದವು.
ಕಳೆದ ವರ್ಷ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ಬ್ಲಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದವು. ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಕೆಜಿಎಫ್ 2', ಕಿಚ್ಚ ಸುದೀಪ್ ಸಿನಿಮಾ 'ವಿಕ್ರಾಂತ್ ರೋಣ' ಎರಡೂ ನ್ಯಾಷನಲ್ ಲೆವೆಲ್‌ನಲ್ಲಿ ಗಮನ ಸೆಳೆದಿದ್ದವು. ಅಲ್ಲದೆ '777 ಚಾರ್ಲಿ'ಯ ರಕ್ಷಿತ್ ಶೆಟ್ಟಿ, 'ಕಾಂತಾರ' ಮೂಲಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಈಗ ಅದೇ ಸಾಲಿಗೆ ಧ್ರುವ ಸರ್ಜಾ ಕೂಡ ಸೇರಲು ಹೊರಟಿದ್ದಾರೆ. ಈ ಕಾರಣಕ್ಕೆ ಧ್ರುವ ಸರ್ಜಾಗೆ ಕಿಚ್ಚ ಸುದೀಪ್ ಹಾಗೂ ಯಶ್‌ಗೆ ಕಾಂಪಿಟೇಷನ್ ಕೊಡುತ್ತಿದ್ದೀರಾ? ಅಂತ ಪ್ರಶ್ನೆ ಮಾಡಲಾಗಿತ್ತು.
ಈ ಪ್ರಶ್ನೆಗೆ ಧ್ರುವ ಸರ್ಜಾ ಉತ್ತರ ಹೀಗಿತ್ತು. "ನಿಜವಾಗಿ ಹೇಳಬೇಕು ಅಂದ್ರೆ, ಅವರೆಲ್ಲರೂ ನನ್ನ ಸಹೋದ್ಯೋಗಿಗಳು. ನಾನು ನನ್ನ ಸ್ನೇಹಿತರೊಂದಿಗೆ ಸ್ಪರ್ಧೆ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಸುದೀಪ್ ಸರ್ ಸೀನಿಯರ್ ಆಕ್ಟರ್. ಹಾಗೇ ಯಶ್ ಸರ್ ಕೂಡ ಸೀನಿಯರ್ ಆಕ್ಟರ್. ಅವರೆಲ್ಲರೂ ನನ್ನ ಸಹೋದ್ಯೋಗಿಗಳು. ಹಾಗಾಗಿ ಅವರೊಂದಿಗೆ ನಾನು ಕಾಂಪಿಟ್ ಮಾಡುವುದಿಲ್ಲ. ಬದಲಾಗಿ ನನ್ನೊಂದಿಗೆ ನಾನೇ ಕಾಂಪಿಟ್ ಮಾಡುತ್ತೇನೆ." ಎಂದು ಹೇಳಿದ್ದಾರೆ.
'ಮಾರ್ಟಿನ್' ಸಿನಿಮಾ ಧ್ರುವ ಸರ್ಜಾ ನಟನೆ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ವಿಶೇಷ ಅಂದ್ರೆ, ಈ ಸಿನಿಮಾಗೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಸ್ಟೋರಿ ಬರೆದಿದ್ದಾರೆ. ಎಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಸಕ್ಸಸ್‌ಫುಲ್ ಕಾಂಬಿನೇಷನ್ ಒಟ್ಟಿಗೆ ಮತ್ತೆ ಕೆಲಸ ಮಾಡಿದ್ದಾರೆ. ಇನ್ನು ರವಿಬಸ್ರೂರ್ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಇದೆ. ಮಣಿ ಶರ್ಮಾ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಹೀಗಾಗಿ ಈ ಸಿನಿಮಾದ ಫೀಲ್ ಕೂಡ ಮಾಸ್ ಆಗಿಯೇ ಇರುತ್ತೆ ಅನ್ನೋ ನಿರೀಕ್ಷೆಯಿದೆ.
ಪ್ಯಾನ್ ಇಂಡಿಯಾ 'ಮಾರ್ಟಿನ್' ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಆದರೆ, ಇನ್ನೂ ಟೀಸರ್ ರಿಲೀಸ್, ಆಡಿಯೋ ರಿಲೀಸ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಲಿದೆ. ಇನ್ನು ಧ್ರುವ ಸರ್ಜಾ ಜೊತೆ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್,ಚಿಕ್ಕಣ್ಣ, ಮಾಳವಿಕ ಅವಿನಾಶ್,ಅಚ್ಯುತ್ ಕುಮಾರ್,ನಿಖಿತಿನ್ ಧೀರ್, ನವಾಬ್ ಶಾ ಹಾಗೂ ರೋಹಿತ್ ಪಾಟಕ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸತ್ಯ ಹೆಗ್ಡೆ ಕ್ಯಾಮರಾ ಹಾಗೂ ಕೆ ಎಂ ಪ್ರಕಾಶ್ ಸಿನಿಮಾಗೆ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ.