ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ : ರಾಜ್ಯ ಸರ್ಕಾರದಿಂದ ಭತ್ತ ಖರೀದಿಗೆ ಬೆಂಬಲ ಬೆಲೆ ನಿಗದಿ
ಬೆಂಗಳೂರು : ರಾಜ್ಯ ಸರ್ಕಾರವು (State Government) ರೈತ ಸಮುದಾಯಕ್ಕೆ (Farmer Community) ಭರ್ಜರಿ ಸಿಹಿಸುದ್ದಿ ನೀಡಿದ್ದು, ಭತ್ತ ಖರೀದಿಗೆ (Purchase of paddy) ಬೆಂಬಲ ಬೆಲೆ ನಿಗದಿಪಡಿಸಿದ್ದು, ಖರೀದಿಗೆ ರೈತರಿಂದ ನೋಂದಣಿ ಪ್ರಾರಂಭಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆದೇಶ ಹೊರಡಿಸಿದೆ.
ಕೇಂದ್ರ ಸರಕಾರ ಸಾಮಾನ್ಯ ಭತ್ತ ಕ್ವಿಂಟಾಲ್‌ಗೆ 1,940 ರೂ., ಎ ಗ್ರೇಡ್ ಭತ್ತಕ್ಕೆ 1,960 ರೂ. ಬೆಲೆ ನಿಗದಿ ಪಡಿಸಿದ್ದು, ಅದರಂತೆ ಭತ್ತ ಮಾರಾಟ ಮಾಡಲು ಇಚ್ಛಿಸುವ ರೈತರು ನೋಂದಣಿ ಮಾಡಿಕೊಳ್ಳುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸೂಚನೆ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ಉಮೇಶ್ ಕತ್ತಿ, ಕೇಂದ್ರ ಸರ್ಕಾರವು 2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 3.35 ಲಕ್ಷ ಮೆ. ಟನ್ ಭತ್ತ ಖರೀದಿಸಲು ಅನುಮತಿ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ನೋಂದಣಿ ಆರಂಭಿಸಲು ಸೂಚನೆ ನೀಡಲಾಗಿದ್ದು, ಒಂದು ತಿಂಗಳು ನೋಂದಣಿ ನಡೆಯಲಿದೆ ತಿಳಿಸಿದ್ದಾರೆ.