ಹೊಸ ತೆರಿಗೆ ಪದ್ಧತಿಯಿಂದ ಹೆಚ್ಚು ಹಣ ಉಳಿಯಲಿದೆ: ನಿರ್ಮಲಾ ಸೀತಾರಾಮನ್

ಹೊಸ ತೆರಿಗೆ ಪದ್ಧತಿಯಿಂದ ಹೆಚ್ಚು ಹಣ ಉಳಿಯಲಿದೆ: ನಿರ್ಮಲಾ ಸೀತಾರಾಮನ್

ವದೆಹಲಿ: ವಾರ್ಷಿಕ ₹ 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡುವ ಹೊಸ ತೆರಿಗೆ ದರ ಪದ್ಧತಿಯು ಜನರ ಕೈಯಲ್ಲಿ ಹೆಚ್ಚಿನ ಹಣವನ್ನು ಉಳಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.

ಬಜೆಟ್‌ ಕುರಿತ ಚರ್ಚೆಗೆ ಲೋಕಸಭೆಯಲ್ಲಿ ಉತ್ತರಿಸಿದ ಅವರು, 'ಈ ಬಜೆಟ್‌ ಅಭಿವೃದ್ಧಿ ಹಾಗೂ ಹಣಕಾಸಿನ ಶಿಸ್ತಿನ ನಡುವೆ ಸಮತೋಲನ ಸಾಧಿಸಿದೆ' ಎಂದು ಹೇಳಿದ್ದಾರೆ. ಹೊಸ ತೆರಿಗೆ ದರ ಪದ್ಧತಿಯು ಬಹಳ ಆಕರ್ಷಕವಾಗಿದೆ ಎಂದು ಅವರು ಹೇಳಿದ್ದಾರೆ.

ಹೊಸ ತೆರಿಗೆ ದರ ಪದ್ಧತಿಯು ಮಧ್ಯಮ ವರ್ಗಕ್ಕೆ ಸೇರಿದ, ಆದಾಯ ತೆರಿಗೆ ಪಾವತಿಸುವ ಬಹುತೇಕರಿಗೆ ಪ್ರಯೋಜನಕಾರಿ ಆಗಿದೆ. ಇಲ್ಲಿ ಹೆಚ್ಚುವರಿ ಆದಾಯಕ್ಕೆ ನೀಡಿರುವ ತೆರಿಗೆ ವಿನಾಯಿತಿಯು ಸಂಪೂರ್ಣವಾಗಿ ಷರತ್ತು ರಹಿತವಾಗಿದೆ. ಹೀಗಾಗಿ ಈ ಪದ್ಧತಿಯ ಅಡಿಯಲ್ಲಿ ಜನರ ಕೈಯಲ್ಲಿ ಹೆಚ್ಚು ಹಣ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ವಾರ್ಷಿಕ ₹ 9 ಲಕ್ಷ ಆದಾಯ ಇದ್ದು, ಅದರಲ್ಲಿ ₹ 4.5 ಲಕ್ಷವನ್ನು ತೆರಿಗೆ ವಿನಾಯಿತಿಗೆ ಸಂಬಂಧಿಸಿದ ಹೂಡಿಕೆಗಳಲ್ಲಿ ತೊಡಗಿಸುವ ವ್ಯಕ್ತಿಗೆ ಹೊಸ ತೆರಿಗೆ ದರ ಪದ್ಧತಿಯು ಪ್ರಯೋಜನಕಾರಿ ಅಲ್ಲ ಎಂದು ಆರ್‌ಎಸ್‌ಪಿ ಸದಸ್ಯ ಎನ್‌.ಕೆ. ಪ್ರೇಮಚಂದ್ರನ್ ಅವರು ಹೇಳಿದ್ದಕ್ಕೆ ನಿರ್ಮಲಾ ಒಂದಿಷ್ಟು ವಿವರಣೆ ನೀಡಿದರು.

'ಇಷ್ಟು ಆದಾಯ ಇರುವ ವ್ಯಕ್ತಿಯು ₹ 4.5 ಲಕ್ಷ ಉಳಿತಾಯ ಮಾಡಬೇಕು ಎಂದಾದರೆ ಬಹಳಷ್ಟು ಪ್ರಯತ್ನ ಬೇಕಾಗುತ್ತದೆ. ಆ ವ್ಯಕ್ತಿಗೆ ಯಾವಾಗಲೂ ಅಷ್ಟೊಂದು ಹಣ ಉಳಿಸಲು, ಅಷ್ಟು ಉಳಿಸಿದ ನಂತರವೂ ಕುಟುಂಬದ ಖರ್ಚುಗಳಿಗೆ ಹಣ ಇರಿಸಿಕೊಳ್ಳಲು ಆಗುವುದಿಲ್ಲ' ಎಂದು ನಿರ್ಮಲಾ ವಿವರಿಸಿದರು.

ಕೇಂದ್ರ ಸರ್ಕಾರ ಕೈಗೊಂಡ ಹಲವು ಕ್ರಮಗಳ ಪರಿಣಾಮವಾಗಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಗರಿಷ್ಠ ಮಿತಿಯೊಳಗೆ ಬಂದಿದೆ ಎಂದು ಅವರು ವಿವರಿಸಿದರು.