ಮಹಿಳೆಯೊಂದಿಗೆ ಅಸಭ್ಯ ವರ್ತನೆಗಾಗಿ ಧರ್ಮದೇಟು; ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು

ಮಹಿಳೆಯೊಂದಿಗೆ ಅಸಭ್ಯ ವರ್ತನೆಗಾಗಿ ಧರ್ಮದೇಟು; ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು

ಮೈಸೂರು, ನವೆಂಬರ್ 29: ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿ ಗ್ರಾಮಸ್ಥರಿಂದ ಧರ್ಮದೇಟು ತಿಂದು ಪೊಲೀಸರ ವಶದಲ್ಲಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಬ್ಯಾಳಾರಹುಂಡಿ ಗ್ರಾಮದ ಸಿದ್ದರಾಜು ಮೃತ ವ್ಯಕ್ತಿಯಾಗಿದ್ದು, ಭಾನುವಾರ ರಾತ್ರಿ ಬ್ಯಾಳಾರುಹುಂಡಿ ಗ್ರಾಮದ ಮಹಿಳೆಯ ಜೊತೆ ಸಿದ್ದರಾಜು ಅಸಭ್ಯವಾಗಿ ವರ್ತಿಸಿದ್ದಾನೆ.

ಈ ವೇಳೆ ಗ್ರಾಮಸ್ಥರು ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ತೀವ್ರ ಅಸ್ವಸ್ಥನಾಗಿದ್ದ ಸಿದ್ದರಾಜುನನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆ ತಲುಪುತ್ತಿದ್ದಂತೆ ಸಿದ್ದರಾಜು ಮೃತಪಟ್ಟಿದ್ದಾನೆ. ರಾತ್ರಿ ಪೂರ್ತಿ ಠಾಣೆಯಲ್ಲೇ ಕಳೆದಿದ್ದ ಸಿದ್ದರಾಜುನನ್ನು ಸೋಮವಾರ ಬೆಳಿಗ್ಗೆ ಗ್ರಾಮಸ್ಥರು ಪ್ರಕರಣ ದಾಖಲಿಸಿದ ನಂತರ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವುದು ವಿಳಂಬವಾಗಿದ್ದೇ ಸಿದ್ದರಾಜು ಸಾವಿಗೆ ಕಾರಣ ಎನ್ನಲಾಗಿದೆ.

ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾಗಿ ಬ್ಯಾಳಾರಹುಂಡಿ ಗ್ರಾಮಸ್ಥರು ಸಿದ್ದರಾಜು ವಿರುದ್ದ ದೂರು ನೀಡಿದ್ದಾರೆ. ಮತ್ತೊಂದೆಡೆ ಬ್ಯಾಳಾರಹುಂಡಿ ಗ್ರಾಮಸ್ಥರು ನಡೆಸಿದ ಹಲ್ಲೆ ಕಾರಣ ಸಿದ್ದರಾಜು ಮೃತಪಟ್ಟಿದ್ದಾನೆಂದು ಆರೋಪಿಸಿರುವ ಪೋಷಕರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಗ್ರಾಮಸ್ಥರ ಹಲ್ಲೆಯಿಂದ ಸಿದ್ದರಾಜು ಮೃತಪಟ್ಟನೇ? ಅಸ್ವಸ್ಥನಾದ ಸಿದ್ದರಾಜುಗೆ ಚಿಕಿತ್ಸೆ ಕೊಡಿಸಲು ವಿಳಂಬ ಮಾಡಿದ್ದೇಕೆ? ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಲ್ಲಿ ವಿಳಂಬ ಮಾಡಿದ ಕಾರಣ ಮೃತಪಟ್ಟನೇ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದೆ. ಸ್ಥಳಕ್ಕೆ ಮೈಸೂರು ಜಿಲ್ಲಾ ಎಸ್ಪಿ ಆರ್. ಚೇತನ್ ಭೇಟಿ ನೀಡಿದ್ದು, ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.