ಬಿಜೆಪಿ, ಕೈ ವಿರುದ್ಧ ಎಚ್ಡಿಕೆ ವಾಗ್ದಾಳಿ

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ನಗರದ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪಂಚರಥ ಯಾತ್ರೆಗೆ ಚಾಲನೆ ನೀಡಿದರು. ಜೆಡಿಎಸ್ ಮುಖಂಡ ಸರವಣ ಸೇರಿದಂತೆ, ಹಲವರು ಇದ್ದಾರೆ.
ಬೆಂಗಳೂರು,ಅ.೨೭- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ, ಕಾಂಗ್ರೆಸ್ ಮತ್ತು ಬಿಜೆಪಿಯ ಪಾಪದ ಕೊಡ ತುಂಬಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನ ಗವಿಗಂಗಾದೇಶ್ವರಸ್ವಾಮಿ ದೇವಸ್ಥಾನದಲ್ಲಿ ಜೆಡಿಎಸ್ನ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ನವರು ಯಾವ ಜೋಡೋ ಯಾತ್ರೆ ಮಾಡಿಕೊಳ್ಳಲಿ. ಬಿಜೆಪಿಯವರು ಸಂಕಲ್ಪಯಾತ್ರೆಯಾದರೂ ಮಾಡಿಕೊಳ್ಳಲಿ ೨೦೨೩ಕ್ಕೆ ಜೆಡಿಎಸ್ ಪಕ್ಷವೇ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯಿಂದ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲೂ ಆಗಲ್ಲ, ಸಮಸ್ಯೆಗಳನ್ನು ನಿವಾರಣೆ ಮಾಡಲು ಆಗಲ್ಲ, ಯಾತ್ರೆಯಿಂದ ಏನೂ ಆಗೋಲ್ಲ ಎಂದರು.ಕಾಂಗ್ರೆಸ್ ಪಕ್ಷದವರು ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಟ್ರ್ಯಾಕ್ಟರ್ ರ್ಯಾಲಿ ನಡೆಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ನವರು ಏನು ಮಾಡಿದ್ದರು ಎಂಬುದನ್ನು ಮೊದಲು ಹೇಳಲಿ, ೫ ವರ್ಷ ಏನೂ ಮಾಡದವರು ಈಗ ಮಾಡುತ್ತೇವೆ ಎಂದರೆ ಜನ ಒಪ್ಪಲ್ಲ, ಕಾಂಗ್ರೆಸ್ನ ಪಾದಯಾತ್ರೆ ಎಲ್ಲ ನೋಡಿದ್ದೇವೆ ಎಂದು ವ್ಯಂಗ್ಯವಾಡಿದರು.ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ಜಾರಿ ಮಾಡಲು ಗಂಡೆದೆ ಬೇಕು ಎಂಬ ಸಚಿವ ಆರ್. ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಗಂಡೆದೆ ಇದ್ದವರು ಯಾಕೆ ೨ ವರ್ಷದಿಂದ ಮೀಸಲಾತಿ ಜಾರಿ ಮಾಡಲಿಲ್ಲ. ನಾಯಕ ಸಮುದಾಯದ ಸ್ವಾಮೀಜಿಗಳನ್ನು ಇಷ್ಟು ದಿನ ಏಕೆ ಧರಣಿಗೆ ಕೂರಿಸಿದರು ಎಂದು ಪ್ರಶ್ನಿಸಿದರು.ಮಾಜಿ ಪ್ರಧಾನಿ ದೇವೇಗೌಡರ ಮುಂದೆ ಯಾವ ಗಂಡೆದೆಯವರೂ ಇಲ್ಲ, ಈ ಮೀಸಲಾತಿ ಬರಲು ದೇವೇಗೌಡರು ಕಾರಣ ಎಂದು ಕಾಂಗ್ರೆಸ್, ಬಿಜೆಪಿಗೆ ತಿರುಗೇಟು ನೀಡಿದರು.ಜೆಡಿಎಸ್ನ ಪಂಚರತ್ನ ಯಾತ್ರೆಗೆ ನ. ೧ ರಂದು ಚಾಲನೆ ನೀಡಬೇಕಿತ್ತು. ಇಂದು ಪ್ರಶಸ್ತವಾದ ದಿನವಾದ್ದರಿಂದ ಚಾಲನೆ ನೀಡಿದ್ದೇನೆ. ನಾಳೆ ನಗರದೇವತೆ ಅಣ್ಣಮ್ಮದೇವಸ್ಥಾನದಲ್ಲಿ ಪೂಜೆ ಮಾಡಿ, ೨ನೇ ದಿನ ಕಾರ್ಯಕ್ರಮ ಮಾಡಲಿದ್ದೇವೆ. ನ. ೧ ರಂದು ಕಾರ್ಯಕ್ರಮ ನಡೆಯಲಿದೆ.
೧೯೯೪ರಲ್ಲಿ ದೇವೇಗೌಡರ ನೇತೃತ್ವದಲ್ಲಿ ಜನತಾದಳ ಚುನಾವಣೆಗೆ ಮೊದಲು ಇಲ್ಲೇ ಪೂಜೆ ಮಾಡಲಾಗಿತ್ತು ಎಂದರು.