ಪೊಲೀಸರ ಭರ್ಜರಿ ಬೇಟೆ 7 ಕೋಟಿ 81 ಲಕ್ಷ ಮೌಲ್ಯದ ಕಳವು ಮಾಲು ವಶ

ಬೆಂಗಳೂರು, ; ಡ್ರಗ್ಸ್ ಮಾರಾಟ, ಮನೆಗಳವು, ವಾಹನಗಳವು ಸೇರಿದಂತೆ 36 ಗಂಭೀರ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ ಭರ್ಜರಿ ಭೇಟೆಯಾಡಿರುವ ಆಗ್ನೇಯ ವಿಭಾಗದ ಪೊಲೀಸರು 7 ಕೋಟಿ 81 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಪತ್ತೆ ಹಚ್ಚಿದ 36 ಪ್ರಕರಣಗಳಲ್ಲಿ ರಾಜ್ಯವಲ್ಲದೆ ತಮಿಳುನಾಡು, ಕೇರಳ, ರಾಜಸ್ತಾನ ಸೇರಿದಂತೆ ಅಂತರ್‌ರಾಜ್ಯದ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಮಹದೇವಜೋಷಿ ಅವರು ತಿಳಿಸಿದ್ದಾರೆ. ಬಂಧಿತ ಆರೋಪಿಗಳಿಂದ 7 ಕೋಟಿ 81 ಲಕ್ಷ ಮೌಲ್ಯದ 1 ಬಿಎಂಡಬ್ಲ್ಯು ಕಾರು, 19 ದ್ವಿಚಕ್ರ ವಾಹನ, 210 ಗ್ರಾಂ ಚಿನ್ನ, 2 ಕೆಜಿ 100 ಗ್ರಾಂ ಬೆಳ್ಳಿ, 250 ಗ್ರಾಂ ಅಫೀಮು, 33 ಲಕ್ಷ ಮೌಲ್ಯದ ಖೋಟಾನೋಟುಗಳು, 5 ಕೆಜಿ 100 ಗ್ರಾಂ ತಿಮಿಂಗಿಲದ ವಾಂತಿಯ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಪತ್ತೆ ಹಚ್ಚಿರುವ 36 ಪ್ರಕರಣಗಳಲ್ಲಿ ಬೇಗೂರು 15, ಪರಪ್ಪನ ಅಗ್ರಹಾರ 3, ಎಸ್‌ಜಿ ಪಾಳ್ಯ 8, ಮೈಕೋಲೇಔಟ್ 8, ಹುಳಿಮಾವು, ಎಲೆಕ್ಟ್ರಾನಿಕ್ ತಲಾ 1 ಪ್ರಕರಣಗಳು ಸೇರಿವೆ ಎಂದು ತಿಳಿಸಿದರು.
ಬೇಗೂರು ಪೊಲೀಸರು ಹೋಂಟಾ ಆಕ್ಟಿವಾ ಸ್ಕೂಟರ್ ಕಳವು ಮಾಡಿದ ಪ್ರಕರಣದ ಜಾಡು ಹಿಡಿದು ಆರೋಪಿಯನ್ನು ಬಂಧಿಸಿ 14 ದ್ವಿಚಕ್ರ ವಾಹನಗಳನ್ನು ವಶಪಡಿಸಕೊಂಡಿದ್ದಾರೆ. ಆರೋಪಿಯು ಬನಶಂಕರಿ, ಜೆಪಿ ನಗರ, ಕೆ.ಎಸ್ ಲೇಔಟ್, ಪುಟ್ಟೇನಹಳ್ಳಿ, ಹುಳಿಮಾವು ಇನ್ನಿತರ ಕಡೆ ಸಹಚರನ ಜತೆ ಸೇರಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುವುದನ್ನು ಬಾಯ್ಬಿಟ್ಟಿದ್ದಾನೆ. ಚಿಕ್ಕಬೇಗೂರಿನ ಅಂಗಾಳ ಪರಮೇಶ್ವರಿ ದೇವಾಲಯದ ಬಳಿ 500 ಹಾಗೂ 2 ಸಾವಿರ ಮುಖ ಬೆಲೆಯ ನಕಲಿ ನೋಟುಗಳನ್ನು ಅಸಲಿ ನೋಟುಗಳಂತೆ ನಂಬಿಸಿ ಚಲಾವಣೆ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ 30 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.