9 ರಿಂದ 12 ನೇ ತರಗತಿಗಳ ಪುನರಾರಂಭಸುಗಮ ಸುರಕ್ಷಿತ ಕಲಿಕೆಗೆ ಒತ್ತು ನೀಡಲು ಜಿಲ್ಲಾಧಿಕಾರಿಗಳ ಕರೆ | Navanagar |Hubli
ಸುಮಾರು 18 ತಿಂಗಳ ನಂತರ ಶಾಲೆ, ಕಾಲೇಜುಗಳು ಪುನರಾರಂಭವಾಗುತ್ತಿವೆ. ವಿದ್ಯಾರ್ಥಿಗಳು ಶುಚಿತ್ವ ಮತ್ತು ಆರೋಗ್ಯ ಸುರಕ್ಷತೆಯ ಕ್ರಮಗಳೊಂದಿಗೆ ಕಲಿಕೆಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕರೆ ನೀಡಿದರು. ನವನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು 9 ರಿಂದ 12ನೇ ತರಗತಿಗಳ ಪುನರಾರಂಭದ ಸಂದರ್ಭದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮಾಸ್ಕ್ ವಿತರಿಸಿ, ಹೂವು ನೀಡಿ ಸ್ವಾಗತಿಸಿದ ಜಿಲ್ಲಾಧಿಕಾರಿಗಳು, ಸುಮಾರು ಒಂದೂವರೆ ವರ್ಷದ ನಂತರ ವಿದ್ಯಾರ್ಥಿಗಳು ತರಗತಿಗಳಲ್ಲಿ ಭೌತಿಕವಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿದೆ. ಆದರೆ ವಿದ್ಯಾರ್ಥಿಗಳು ಕೋವಿಡ್ ಸುರಕ್ಷತಾ ನಿಟ್ಟಿನಲ್ಲಿ ಮೈ ಮರೆಯಬಾರದು. ಶಾಲೆಗಳ, ತರಗತಿಗಳ ಪುನರಾರಂಭ ಸಂತೋಷದಾಯಕವಾಗಿದೆ. ಭವಿಷ್ಯ ಉಜ್ವಲವಾಗಿಸಿಕೊಳ್ಳಲು ದೊಡ್ಡ ಗುರಿ ಹೊಂದಿರಬೇಕು. ಆಸಕ್ತಿದಾಯಕ ವಿಷಯಗಳನ್ನು ಗುರುತಿಸಿಕೊಂಡು ಆ ರಂಗದಲ್ಲಿಯೇ ಉತ್ತಮ ಸಾಧನೆ ಮಾಡಲು ಗಮನ ಕೇಂದ್ರೀಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕೆಪಿಎಸ್ ಶಾಲೆಯ ಹತ್ತನೇ ತರಗತಿಯ ಅಂಧ ವಿದ್ಯಾರ್ಥಿ ಹನುಮಂತಪ್ಪ ಮಾತನಾಡಿ, ಭೌತಿಕವಾಗಿ ತರಗತಿಗಳು ಪುನರಾರಂಭವಾಗಿರುವುದು ಸಂತಸ ತಂದಿದೆ ಎಂದರು. ಈ ವೇಳೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಿದಂಬರ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಕೆಪಿಎಸ್ ಪ್ರಾಚಾರ್ಯ ಅಶೋಕ ಸವಣೂರ ಮತ್ತಿತರರು ಉಪಸ್ಥಿತರಿದ್ದರು.