ಜಾತಿ ಆಧಾರಿತ ಜನಗಣತಿಗಾಗಿ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ ನಿತೀಶ್, ತೇಜಸ್ವಿ

ಜಾತಿ ಆಧಾರಿತ ಜನಗಣತಿಗಾಗಿ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ ನಿತೀಶ್, ತೇಜಸ್ವಿ

ನವದೆಹಲಿ, ಆಗಸ್ಟ್ 23: ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿ ಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ನಿಯೋಗವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್, ಎಚ್‌ಎಎಮ್‌ನ ಜಿತನ್ ರಾಮ್ ಮಾಂಝಿ ಮತ್ತು ವಿಐಪಿಯ ಮುಖೇಶ್ ಸಹಾನಿ ಸೇರಿದಂತೆ ಬಿಹಾರದ 10 ರಾಜಕೀಯ ಪಕ್ಷಗಳ ನಾಯಕರ ನಿಯೋಗವು ನವದೆಹಲಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಜಾತಿ ಆಧಾರಿತ ಜನಗಣತಿ ನಡೆಸುವ ಕುರಿತು ಚರ್ಚಿಸಿದೆ.

"ನಿಯೋಗದ ಎಲ್ಲ ಸದಸ್ಯರ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಆಲಿಸಿದ್ದಾರೆ. ನಾವು ಅದರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಪ್ರಧಾನಮಂತ್ರಿಯನ್ನು ಒತ್ತಾಯಿಸಿದ್ದೇವೆ ಮತ್ತು ಜಾತಿ ಗಣತಿ ಕುರಿತು ರಾಜ್ಯ ವಿಧಾನಸಭೆಯಲ್ಲಿ ಎರಡು ಬಾರಿ ನಿರ್ಣಯಗಳನ್ನು ಹೇಗೆ ಅಂಗೀಕರಿಸಲಾಗಿದೆ ಎಂಬುದರ ಕುರಿತು ನಾವು ಅವರಿಗೆ ತಿಳಿಸಿದ್ದೇವೆ," ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.