ಕಾರು ನಿಧಾನವಾಗಿ ಚಲಾಯಿಸಿ - 2019ರಲ್ಲೇ ರಿಷಭ್‌ಗೆ ಸಲಹೆ ನೀಡಿದ್ದ ಧವನ್
ನವದೆಹಲಿ: ಮೂರು ವರ್ಷಗಳ ಹಿಂದೆಯೇ ರಿಷಭ್ ಪಂತ್ ಅವರಿಗೆ ಕಾರು ನಿಧಾನವಾಗಿ ಚಾಲನೆ ಮಾಡಲು ಸಹ ಆಟಗಾರ ಶಿಖರ್ ಧವನ್ ಸಲಹೆ ನೀಡಿದ್ದರು. ಈ ಸಂಬಂಧ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
2019ರ ಐಪಿಎಲ್ ವೇಳೆಯಲ್ಲಿ ರಿಷಭ್ ಪಂತ್ ಜೊತೆ ಧವನ್ ಸಂಭಾಷಣೆ ನಡೆಸುತ್ತಿದ್ದ ವಿಡಿಯೊದ ತುಣುಕನ್ನು ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.
ವಿಡಿಯೊದಲ್ಲಿ ತಮಗೆ ಏನಾದರೂ ಒಂದು ಸಲಹೆ ಕೊಡುವಂತೆ ಧವನ್ ಅವರಲ್ಲಿ ರಿಷಭ್ ಕೇಳುತ್ತಾರೆ. ಇದಕ್ಕೆ ವಾಹನ ನಿಧಾನವಾಗಿ ಓಡಿಸು ಎಂದು ಧವನ್ ನಗುಮುಖದಿಂದಲೇ ಉತ್ತರಿಸುತ್ತಾರೆ.
Shikhar Dhawan gave Rishabh Pant right advice about driving. pic.twitter.com/XxFRE5K74j
— Ami ✨ (@kohlifanAmi) December 30, 2022
ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ 25 ವರ್ಷದ ರಿಷಭ್ ಪಂತ್ ಅವರು ಶುಕ್ರವಾರ ಬೆಳಿಗ್ಗೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಉತ್ತರಾಖಂಡದಲ್ಲಿ ಪಂತ್ ಅವರು ಸಂಚರಿಸುತ್ತಿದ್ದ ಕಾರು ಹೆದ್ದಾರಿಯ ವಿಭಜಕಕ್ಕೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಕಾರಿಗೆ ಬೆಂಕಿ ಆವರಿಸುವ ಮುನ್ನವೇ ಪಂತ್ ಕಾರಿನಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಂತ್ ಹರಿದ್ವಾರದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಪ್ರಯಾಣಿಸುತ್ತಿದ್ದರು.