ಆಸ್ಟ್ರೇಲಿಯಾ ಇವರಿಬ್ಬರ ಮೇಲೆ ಹೆಚ್ಚು ಅವಲಂಬಿತವಾಗಿದೆ; ಗ್ಲೆನ್ ಮೆಕ್‌ಗ್ರಾತ್

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧವಾರ, ಮಾರ್ಚ್ 1ರಂದು ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಆತಿಥೇಯ ಭಾರತ ತಂಡ ಈಗಾಗಲೇ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ.
ಇನ್ನು ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡುತ್ತಿದ್ದು, ನಾಯಕ ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಕೆಲವು ಆಟಗಾರರು ಮೂರನೇ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಇದೇ ವೇಳೆ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬ್ಯಾಟಿಂಗ್ ವಿಷಯಕ್ಕೆ ಬಂದಾಗ, ಆಸ್ಟ್ರೇಲಿಯಾ ತಂಡ ಸ್ಟೀವನ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಶ್ಚಾಗ್ನೆ ಅವರ ವೈಯಕ್ತಿಕ ಪ್ರದರ್ಶನದ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್ ತಿಳಿಸಿದ್ದಾರೆ.
ಸೋಮವಾರ ಸುದ್ದಿ ಸಂಸ್ಥೆ ಪಿಟಿಐಗೆ ಮಾತನಾಡಿದ ಗ್ಲೆನ್ ಮೆಕ್‌ಗ್ರಾತ್, ಭಾರತೀಯ ಸ್ಪಿನ್ ದಾಳಿಯನ್ನು ಒಂದು ತಂಡವಾಗಿ ಎದುರಿಸಲು ಆಸ್ಟ್ರೇಲಿಯಾ ತಂಡವು ಸೂಕ್ತ ಯೋಜನೆ ಹಾಕಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಸ್ಟೀವನ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಶ್ಚಾಗ್ನೆ ಮೇಲೆ ಹೆಚ್ಚು ಅವಲಂಬಿತರಾಗಿದೆ ಎಂದು ನಾನು ಭಾವಿಸುತ್ತೇನೆ. ಟ್ರಾವಿಸ್ ಹೆಡ್ ನಿಜವಾಗಿಯೂ ಉತ್ತಮ ಫಾರ್ಮ್ ಅನ್ನು ಹೊಂದಿದ್ದಾರೆ. ಉಳಿದೆರಡು ಪಂದ್ಯಗಳಲ್ಲಿ ಆಸ್ಟ್ರೇಕಿಯಾದ ಇಡೀ ಬ್ಯಾಟಿಂಗ್ ಲೈನ್-ಅಪ್ ಮೈ ಕೊಡವಿಕೊಂಡು ಎದ್ದು ನಿಲ್ಲಬೇಕಾಗಿದೆ," ಎಂದು ಗ್ಲೆನ್ ಮೆಕ್‌ಗ್ರಾತ್ ತಿಳಿಸಿದರು.
ಪ್ರವಾಸಿ ಆಸ್ಟ್ರೇಲಿಯಾ ತಂಡದ ಆಟದ ವಿಧಾನ ಮತ್ತು ಆಡುವ 11ರ ಬಳಗದ ಆಯ್ಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಮ್ಮದೇ ದೇಶದ ಮಾಜಿ ಆಟಗಾರರಿಂದ ಟೀಕೆಗೆ ಒಳಗಾಗಿದೆ.
"ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್‌ಗಳು ತುಂಬಾ ರಕ್ಷಣಾತ್ಮಕ ಆಡಿದರು ಮತ್ತು ಎರಡನೇ ಪಂದ್ಯದಲ್ಲಿ ತುಂಬಾ ಆಕ್ರಮಣಕಾರಿ ಆಡಿದರು. ಹೀಗಾಗಿ ಕೊನೆಯ ಎರಡು ಪಂದ್ಯಗಳಿಂದ ಏನಾದರೂ ಕಲಿತಿದ್ದಾರೆಯೇ ಎಂದು ನಾವು ನಿರೀಕ್ಷಿಸುತ್ತೇವೆ," ಎಂದು ಆಸೀಸ್ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್ ಹೇಳಿದರು.
ವೇಗಿಗಳಾದ ಜೋಶ್ ಹ್ಯಾಝಲ್‌ವುಡ್, ಮಿಚೆಲ್ ಸ್ಟಾರ್ಕ್ ಮತ್ತು ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅನುಪಸ್ಥಿತಿಯು ಆಸ್ಟ್ರೇಲಿಯಾ ತಂಡದ ಸಮತೋಲನದ ಮೇಲೆ ಪರಿಣಾಮ ಬೀರಿದೆ ಅಂಬುದನ್ನು ಒಪ್ಪಿಕೊಂಡ ಗ್ಲೆನ್ ಮೆಕ್‌ಗ್ರಾತ್, ಇದೇ ವೇಳೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ನಾಗ್ಪುರದ ಮೊದಲ ಟೆಸ್ಟ್ ಪಂದ್ಯದಿಂದ ಟ್ರಾವಿಸ್ ಹೆಡ್‌ರನ್ನು ಹೊರಗಿಡುವ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
"ಇಲ್ಲಿನ ಪಿಚ್‌ಗಳಲ್ಲಿ ಸ್ವಲ್ಪ ರಿವರ್ಸ್ ಸ್ವಿಂಗ್ ಆರಂಭಿಕ ವಿಕೆಟ್‌ಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ. ಭಾರತೀಯ ಆಟಗಾರರು, ಅದರಲ್ಲೂ ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರಿಗೆ ಕ್ರೆಡಿಟ್ ನೀಡಬೇಕು. ಅವರಿಗೆ ಈ ಪಿಚ್‌ಗಳಲ್ಲಿ ಹೇಗೆ ಆಡಬೇಕೆಂದು ಮತ್ತು ಸ್ಪಿನ್ ಬೌಲರ್‌ಗಳಿಗೆ ಎದುರಾಳಿ ತಂಡ ಏನೆಂಬುದನ್ನು ಅರ್ಥಮಾಡಿಕೊಂಡಿದ್ದಾರೆ," ಎಂದು ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್ ನಾಗ್ಪುರ ಮತ್ತು ದೆಹಲಿಯಲ್ಲಿ ಭಾರತ ತಂಡ ಆಡಿದ ರೀತಿಗೆ ತಲೆದೂಗಿದರು.