ಸಮುದಾಯ ಭವನಕ್ಕೆ ₹ 10 ಲಕ್ಷ ಅನುದಾನ

ಕಲಬುರಗಿ: 'ಬಿದ್ದಾಪುರ ಕಾಲೊನಿಯಲ್ಲಿ ವಿಪ್ರ ಅಡುಗೆದಾರರ ಸಮುದಾಯ ಭವನಕ್ಕೆ ಈಗಾಗಲೇ ಜಾಗ ಮಂಜೂರು ಆಗಿದೆ. ಈ ಭವನಕ್ಕೆ ₹ 10 ಲಕ್ಷ ಅನುದಾನ ನೀಡಲಾಗುವುದು' ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಭರವಸೆ ನೀಡಿದರು.
ನಗರದ ಹಳೇ ಕೊಠಾರಿ ಭವನದಲ್ಲಿ ಸೋಮವಾರ ಅಖಿಲ ಕರ್ನಾಟಕ ವಿಪ್ರ ಅಡುಗೆದಾರರು ಹಾಗೂ ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘ, ಅನ್ನಪೂರ್ಣೇಶ್ವರಿ ಅಡುಗೆ ಮಾಡುವವರು ಮತ್ತು ಬಡಿಸುವವರ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ವಿಪ್ರ ಅಡುಗೆದಾರರ ರಾಜ್ಯ ಮಟ್ಟದ ಪ್ರಥಮ ಸಮಾವೇಶದಲ್ಲಿ ಅವರು ಮಾತನಾಡಿದರು.
'₹ 50 ಲಕ್ಷ ಅನುದಾನದಲ್ಲಿ ಬಿದ್ದಾಪುರ ಕಾಲೊನಿಯಲ್ಲಿನ ರಾಯರ ಮಠದ ನೂತನ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಅಡುಗೆ ಸಿದ್ಧಪಡಿಸುವುದು ಪುಣ್ಯದ ಕೆಲಸ. ನಮ್ಮ ಸರ್ಕಾರದಿಂದ ವಿಪ್ರ ಸಮಾಜದ ನಿಗಮ ಸ್ಥಾಪಿಸಿ ಸಾಕಷ್ಟು ಅನುದಾನ ನೀಡಲಾಗಿದೆ' ಎಂದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಜಗದೀಶ ಹುನಗುಂದ ಮಾತನಾಡಿ, 'ಮಂಡಳಿ ಮನವಿ ಮೇರೆಗೆ ಬಡ ವಿಪ್ರರು, ಅಡುಗೆದಾರರು ಮತ್ತು ಅರ್ಚಕರಿಗೆ ಬೆಂಗಳೂರಿನಲ್ಲಿ 1,000 ಮನೆ ನೀಡಲಾಗಿದೆ. ಕಲಬುರಗಿಗೂ 500 ಮನೆ ಮಂಜೂರು ಮಾಡಲು ಮುಖ್ಯಮಂತ್ರಿಗೆ ಕೋರಲಾಗಿದೆ' ಎಂದರು.
'ಮಂಡಳಿ ವತಿಯಿಂದ ಈ ಬಾರಿ 14 ಸಾವಿರ ವಿದ್ಯಾರ್ಥಿಗಳಿಗೆ ಸಾಂದೀಪಿನಿ ಶಿಷ್ಯವೇತನ ನೀಡಲಾಗುತ್ತಿದೆ. ಇದರಲ್ಲಿ 1,300 ಮಕ್ಕಳು ಕಲಬುರಗಿಯವರು. ರಾಜ್ಯದಾದ್ಯಂತ ಪೂಜಾ ಮತ್ತು ಸಂಧ್ಯಾವಂದನೆ ಶಿಬಿರ ಆಯೋಜಿಸಲಾಗುತ್ತಿದೆ. ಸ್ತ್ರೀಶಕ್ತಿ ಸಂಘಗಳಿಗೆ ₹ 1 ಲಕ್ಷ ಸಹಾಯಧನ ನೀಡಲಾಗುತ್ತಿದೆ' ಎಂದು ವಿವರಿಸಿದರು.
ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಅವರು, 'ಎಲ್ಲ ಕಲೆಗಳಿಗೂ ಬೆಲೆ ಇದೆ. ಎನಗಿಂತ ಬ್ರಾಹ್ಮಣರು ಒಗ್ಗಟ್ಟಾಗಬೇಕು. ಅಡುಗೆದಾರರು, ಅರ್ಚಕರ ಒಂದೇ ಸಮಾವೇಶ ಆಗಲಿ. ಮಕ್ಕಳಿಗೆ ಭಾಗವತ ಓದಿಸಿ, ಸಂಧ್ಯಾವಂದನೆ ಮಾಡಿಸಿ' ಎಂದರು.
ಕಾಂಗ್ರೆಸ್ ಮುಖಂಡ ಅಲ್ಲಮಪ್ರಭು ಪಾಟೀಲ ಮಾತನಾಡಿ, 'ಸ್ವಾತಂತ್ರ್ಯ ಹೋರಾಟ, ಶಿಕ್ಷಣ ಸೇರಿ ಹಲವಾರು ಕ್ಷೇತ್ರಗಳಿಗೆ ವಿಪ್ರ ಸಮಾಜ ಕೊಡುಗೆ ನೀಡಿದೆ. ಎಲ್ಲ ಬ್ರಾಹ್ಮಣರು ಆರ್ಥಿಕವಾಗಿ ಶಕ್ತರು ಇರುವುದಿಲ್ಲ. ಅವರಲ್ಲೂ ಹಿಂದುಳಿದವರಿದ್ದಾರೆ. ಅವರ ಸಮಸ್ಯೆಗಳನ್ನು ಪರಿಹರಿಸಲು ರಾಜಕೀಯ ಇಚ್ಛಾಶಕ್ತಿ ಬೇಕು' ಎಂದರು.
ಉದ್ಯಮಿ ಕೃಷ್ಣಾಜಿ ಕುಲಕರ್ಣಿ ಮಾತನಾಡಿ, 'ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಅಡುಗೆದಾರರ ಪಾತ್ರ ಮುಖ್ಯ. ಆದರೆ, ಅವರಿಗೆ ವರ್ಷಪೂರ್ತಿ ಕಾರ್ಯಕ್ರಮ ಇರುವುದಿಲ್ಲ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾತ್ರ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬೇಡಿಕೆ ಇರುತ್ತದೆ' ಎಂದರು.
ಪಾಲಿಕೆ ಸದಸ್ಯೆ ಶೋಭಾ ದೇಸಾಯಿ,ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಅಖಿಲ ಕರ್ನಾಟಕ ವಿಪ್ರ ಅಡುಗೆದಾರರು ಹಾಗೂ ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರುರಾಜ ಕುಲಕರ್ಣಿ ಚಳ್ಳಾರಿ ಮಾತನಾಡಿದರು.
ಕಲಬುರಗಿ, ಯಾದಗಿರಿ, ಬೀದರ್, ಗದಗ, ದಾವಣಗೆರೆ, ರಾಯಚೂರು, ಹುಬ್ಬಳ್ಳಿ, ಧಾರವಾಡ, ಉಡುಪಿ, ಕೊಪ್ಪಳ, ಬೆಳಗಾವಿ, ಬಳ್ಳಾರಿ, ಹೊಸಪೇಟೆ ಮತ್ತು ವಿಜಯಪುರ ಜಿಲ್ಲೆಗಳ ಹಿರಿಯ ಅಡುಗೆದಾರರನ್ನು ಸನ್ಮಾನಿಸಲಾಯಿತು.
ಅನ್ನಪೂರ್ಣೇಶ್ವರಿ ಅಡುಗೆ ಮಾಡುವವರು ಮತ್ತು ಬಡಿಸುವವರ ಸಂಘದ ಜಿಲ್ಲಾ ಅಧ್ಯಕ್ಷ ಅನೀಲ ಅಷ್ಟಗಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಸೂರಜ್ ತಿವಾರಿ, ಡಾ. ಪ್ರಹ್ಲಾದ್ ಭುರ್ಲಿ, ಬ್ರಾಹ್ಮಣ ಸಂಘದ ಜಿಲ್ಲಾ ಅಧ್ಯಕ್ಷ ದತ್ತು ಪೂಜಾರಿ, ಕಲ್ಯಾಣಿ ಜಿ.ಜೋಶಿ, ಆನಂದ ಎಂ.ಕುಲಕರ್ಣಿ, ಎಚ್.ಕೆ. ವೆಂಕಟೇಶ ಬಳ್ಳಾರಿ, ರಾಘವೇಂದ್ರ ದಂಡಿನ ಇದ್ದರು. ಇದಕ್ಕೂ ಮುನ್ನ ಅನ್ನಪೂರ್ಣೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಿತು.
'ವಿಪ್ರರಿಗೂ ಶೇ 10 ಮೀಸಲಾತಿ ಕಲ್ಪಿಸಿ'
'ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯುಎಸ್) ನೀಡುವ ಕೇಂದ್ರ ಸರ್ಕಾರದ ಶೇ 10ರಷ್ಟು ಮೀಸಲಾತಿ ಸೌಲಭ್ಯವನ್ನು ಕರ್ನಾಟಕದಲ್ಲೂ ವಿಪ್ರ ಸಮಾಜಕ್ಕೆ ಕಲ್ಪಿಸಬೇಕು' ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಜಗದೀಶ ಹುನಗುಂದ ಸೋಮವಾರ ಒತ್ತಾಯಿಸಿದರು.
'ಬ್ರಾಹ್ಮಣರಿಗೆ ಜಾತಿ ಪ್ರಮಾಣಪತ್ರ ಕೊಡಲಾಗುತ್ತಿದೆ. ಶೇ 10ರಷ್ಟು ಮೀಸಲಾತಿ ಸಿಕ್ಕಲ್ಲಿ ಉದ್ಯೋಗ, ಶಿಕ್ಷಣದಲ್ಲಿ ಬಡ ಬ್ರಾಹ್ಮಣರು, ಅಡುಗೆಯವರು ಮತ್ತು ಅರ್ಚಕರಿಗೆ ಅವಕಾಶ, ಸೌಲಭ್ಯ ದೊರೆಯುತ್ತವೆ' ಎಂದರು.
'ಮೀಸಲಾತಿ ಕೋರಿ ರಾಜ್ಯಪಾಲ, ಮುಖ್ಯಮಂತ್ರಿ ಮತ್ತು ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿ ಆಗುವುದರೊಳಗೆ ಬೇಡಿಕೆ ಈಡೇರುವ ನಿರೀಕ್ಷೆ ಇದೆ' ಎಂದರು.
'ಅಡುಗೆ ಸಿದ್ಧಪಡಿಸುವಾಗ ಕೈ-ಕಾಲು ಸುಡುವುದು ಸೇರಿ ಇನ್ನಿತರ ಅವಘಡ ಸಂಭವಿಸುತ್ತವೆ. ಹೀಗಾಗಿ, ಅಪಘಾತ ವಿಮೆ ಸೌಲಭ್ಯ ನೀಡಬೇಕು' ಎಂದು ಅಖಿಲ ಕರ್ನಾಟಕ ವಿಪ್ರ ಅಡುಗೆದಾರರು ಹಾಗೂ ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರುರಾಜ ಕುಲಕರ್ಣಿ ಚಳ್ಳಾರಿ ಆಗ್ರಹಿಸಿದರು.
'ಅರ್ಜಿ ಸಲ್ಲಿಸಿದರೂ ಸಿಗದು ಸಾಲ'
'ಸ್ವಯಂ ಉದ್ಯೋಗಕ್ಕೆ ₹20 ಸಾವಿರ ಸಹಾಯಧನದೊಂದಿಗೆ ಬ್ಯಾಂಕ್‌ಗಳಿಂದ ಸಾಲ ನೀಡಲಾಗುತ್ತಿದೆ' ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಜಗದೀಶ ಹುನಗುಂದ ಹೇಳಿದರು. ನಂತರ ಅಡುಗೆದಾರರ ಸಂಘದ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ವೆಂಕಟೇಶ ಬಳ್ಳಾರಿ ಮಾತನಾಡಿ, 'ರಾಯಚೂರು ಜಿಲ್ಲೆಯಲ್ಲಿ ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸಿದರೂ ಸಾಲ ಸಿಗುತ್ತಿಲ್ಲ' ಎಂದರು.
'ಮಂಡಳಿ ಅಧ್ಯಕ್ಷರು, ನಿರ್ದೇಶಕರು ಸೇರಿ ಯಾರಿಗೆ ಕೇಳಿದರೂ ಸ್ಪಂದನೆ ಸಿಗುತ್ತಿಲ್ಲ. ಒಬ್ಬರಿಗಾದರೂ ಸಾಲ ಸಿಕ್ಕಲ್ಲಿ ತಿಳಿಸಿ. ನೊಂದ ಮನಸ್ಸುಗಳಿಗೆ ಸುಳ್ಳು ಆಶ್ವಾಸನೆ ಬೇಡ. ಮಂಡಳಿಯಿಂದ ಸರ್ವೆ ಮಾಡಿಸಿ' ಎಂದು ಒತ್ತಾಯಿಸಿದರು.