ವಿದೇಶದಲ್ಲಿ ಇದ್ದುಕೊಂಡೇ ಕನ್ನಡ ಸಾಹಿತ್ಯ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದ ಹಿರಿಯ ಲೇಖಕ ನಾಗ ಐತಾಳ ಇನ್ನಿಲ್ಲ

ಬೆಂಗಳೂರು: 'ಅಹಿತಾನಲ' ಎಂಬ ಕಾವ್ಯನಾಮದಡಿ ಹಲವು ಕೃತಿಗಳನ್ನು ಬರೆದು ಓದುಗರ ಮನಗೆದ್ದ ನಾಗ ಐತಾಳ ಅವರು ಇನ್ನಿಲ್ಲ. ವಿದೇಶದಲ್ಲಿದ್ದುಕೊಂಡೇ ಕನ್ನಡ ಸಾಹಿತ್ಯ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದ ಹಿರಿಯ ಲೇಖಕ ನಾಗ ಐತಾಳ ಅವರು ಶನಿವಾರ ನಿಧನರಾದರು.
1932ರ ಅಕ್ಟೋಬರ್ 5ರಂದು ಉಡುಪಿ ಜಿಲ್ಲೆಯ ಕೋಟದಲ್ಲಿ ಜನಿಸಿದ ನಾಗ ಐತಾಳ ಅವರು ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಆರ್ಯ ವಿದ್ಯಾ ಶಾಲೆಯಲ್ಲಿ ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದ ನಂತರಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದರು. ಪಿಎಚ್.ಡಿ ಪದವಿ ಪಡೆದ ಕೆನಡಾದಲ್ಲಿ ಬಯೋಕೆಮಿಸ್ಟ್ರಿಯಲ್ಲಿ ಹೆಚ್ಚಿನ ಅಧ್ಯಯನ ನಡೆಸಿದರು. ನಂತರ ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯದಲ್ಲಿ 1975ರಿಂದ 2001ರ ವರೆಗೆ ಸಂಶೋಧನ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.
ಕ್ಯಾಲಿಫೋರ್ನಿಯಾದ ಅರ್‍ಕಾಡಿಯದಲ್ಲಿ ನೆಲೆಸಿದ್ದ ನಾಗ ಐತಾಳರು ಸ್ನೇಹಿತರೊಂದಿಗೆ 'ಕನ್ನಡ ಸಾಹಿತ್ಯ ರಂಗ' ಆರಂಭಿಸಿದ್ದರು. ಸ್ಥಾಪಕ ಸದಸ್ಯರಾಗಿ, ನಂತರ ಅಧ್ಯಕ್ಷರಾಗಿದ್ದರು.
'ಅಮೆರಿಕನ್ನಡಿಗನೊಬ್ಬನ ದಿನಚರಿಯಿಂದ' (ಅಮೆರಿಕಾ ಅನುಭವ ಕಥನ), 'ಕಾದೇ ಇರುವಳು ರಾಧೆ', ಒಂದಾನೊಂದು ಕಾಲದಲ್ಲಿ, ಕಲಬೆರಕೆ, ದೂರ ತೀರದಿಂದ ಹರಿದು ಬಂದ ಕತೆಗಳು, ಜೀವನ ರಹಸ್ಯ, ತಲೆಮಾರ ಸೆಲೆ, ಅಮೆರಿಕದಲ್ಲಿ ಕಂಡ ಕನಸು, ಕಟ್ಟಿದ ನೆನಪು, ಸಾಹಿತ್ಯ ಸ್ಪಂದನ, ಸ್ಮರಣೆ ಸಾಲದೆ, ಕಾಲ ಉರುಳಿ:ಉಳಿದುದು ನೆನಪಷ್ಟೆ… ಸೇರಿ ಹಲವು ಕೃತಿಗಳನ್ನು ನಾಗ ಐತಾಳ್ ಅವರು ರಚಿಸಿದ್ದಾರೆ.
ಕಾರಂತ ಚಿಂತನ-ಕಡಲಾಚೆಯ ಕನ್ನಡಿಗರಿಂದ, ಕುವೆಂಪು ಸಾಹಿತ್ಯ ಸಮೀಕ್ಷೆ, ಯದುಗಿರಿಯ ಬೆಳಕು- ಪುತಿನ, ಕನ್ನಡಮರಚೇತನ-ಮಾಸ್ತಿ, ಗೆಲುವಿನ ಚಿಲುಮೆ-ರಾಜರತ್ನಂ, ಅನಂತ ಮುಖದ ಮೂರ್ತಿ, ಬೇಂದ್ರೆ ಅಂದ್ರೆ…, ಅಮೆರಿಕಾ ಕನ್ನಡ ಬರಹಗಾರರು, ನೆನಪಿನ ಓಣಿಯೊಳಗೆ ಮಿನಿಗುವ ದೀಪ… ಇವರುಗಳು ಐತಾಳ್ರ ಸಂಪಾದಿತ ಕೃತಿಗಳು.