ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಫಾರ್ಮ್ ಎದುರಾಳಿಗಳ ನಿದ್ದೆಗೇಡಿಸಿದೆ; ಆಂಗ್ಲ ಮಾಜಿ ಕ್ರಿಕೆಟಿಗ

ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಫಾರ್ಮ್ ಎದುರಾಳಿಗಳ ನಿದ್ದೆಗೇಡಿಸಿದೆ; ಆಂಗ್ಲ ಮಾಜಿ ಕ್ರಿಕೆಟಿಗ

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅತ್ಯುತ್ತಮ ಶತಕ ಬಾರಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ಫಾರ್ಮ್‌ಗೆ ಮರಳಿದರು.

ಅಲ್ಲದೇ, ರೆಡ್ ಬಾಲ್ ಆಟದಲ್ಲಿ ಮೂರುವರೆ ವರ್ಷಗಳ ಬಳಿಕ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದರು.

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿಯ ಶತಕದ ಆಟವನ್ನು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಪಾಲ್ ಕಾಲಿಂಗ್‌ವುಡ್ ಶ್ಲಾಘಿಸಿದ್ದಾರೆ.

ಒಟ್ಟಾರೆ, 28 ಟೆಸ್ಟ್ ಶತಕ ಬಾರಿಸಿರುವ ವಿರಾಟ್ ಕೊಹ್ಲಿ, ಕಳೆದ ಮೂರು ವರ್ಷಗಳಲ್ಲಿ ಅವರ ಮೊದಲ ಟೆಸ್ಟ್ ಶತಕವಾಗಿದೆ. 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದಲ್ಲಿ ಕೊನೆಯ ಶತಕ ಬಂದಿತ್ತು. ಈ ಸಮಯದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಫಾರ್ಮ್ ಗಮನಿಸಿದರೆ, ಮತ್ತೊಮ್ಮೆ ಎಲ್ಲಾ ದೇಶಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದು ಪಾಲ್ ಕಾಲಿಂಗ್‌ವುಡ್ ಅಭಿಪ್ರಾಯಪಟ್ಟಿದ್ದಾರೆ.

ರನ್ ಮಷಿನ್ ವಿರಾಟ್ ಕೊಹ್ಲಿ ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ವಿಶ್ವದ ಯಾವುದೇ ಪಿಚ್‌ನಲ್ಲಾದರೂ ರನ್ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು 46 ವರ್ಷದ ಪಾಲ್ ಕಾಲಿಂಗ್‌ವುಡ್ ತಿಳಿಸಿದರು.

2022ರ ಏಷ್ಯಾ ಕಪ್, 2022ರ ಟಿ20 ವಿಶ್ವಕಪ್‌ನ ಆವೃತ್ತಿಗಳಲ್ಲಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಹಾಗಾಗಿ, ವಿರಾಟ್ ಕೊಹ್ಲಿ ತಮ್ಮ ಸಂಪೂರ್ಣ ಬ್ಯಾಟಿಂಗ್ ಫಾರ್ಮ್‌ಗೆ ಮರಳಿದ್ದಾರೆ. ಇದು ಎಲ್ಲ ಎದುರಾಳಿ ತಂಡಗಳ ನಿದ್ದೆಗೇಡಿಸಲಿದೆ ಎಂದು ಪಾಲ್ ಕಾಲಿಂಗ್‌ವುಡ್ ಹೇಳಿದರು.

ವಿರಾಟ್ ಕೊಹ್ಲಿಯ ಟೆಸ್ಟ್ ಕ್ರಿಕೆಟ್ ದಾಖಲೆ

ಭಾರತ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇಲ್ಲಿಯವರೆಗೆ 108 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 49ರ ಸರಾಸರಿಯೊಂದಿಗೆ 8416 ರನ್ ಗಳಿಸಿದ್ದಾರೆ. ಇದರಲ್ಲಿ 28 ಶತಕಗಳು ಮತ್ತು 28 ಅರ್ಧಶತಕಗಳು ಒಳಗೊಂಡಿವೆ. 254 ರನ್ ಅತಿ ಹೆಚ್ಚಿನ ಮೊತ್ತವಾಗಿದೆ.

ವಿರಾಟ್ ಕೊಹ್ಲಿಯ ಏಕದಿನ ಕ್ರಿಕೆಟ್ ದಾಖಲೆ

271 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಅಡಿರುವ ವಿರಾಟ್ ಕೊಹ್ಲಿ 58ರ ಸರಾಸರಿಯೊಂದಿಗೆ 12809 ರನ್ ಬಾರಿಸಿದ್ದಾರೆ. ಇದರಲ್ಲಿ 46 ಶತಕ ಮತ್ತು 64 ಅರ್ಧಶತಕಗಳು ಒಳಗೊಂಡಿವೆ. ಶ್ರೀಲಂಕಾ ವಿರುದ್ಧದ 183 ಗರಿಷ್ಠ ಸ್ಕೋರ್ ಆಗಿದೆ.

ವಿರಾಟ್ ಕೊಹ್ಲಿಯ ಟಿ20 ಕ್ರಿಕೆಟ್ ದಾಖಲೆ

115 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ, 53ರ ಸರಾಸರಿಯಲ್ಲಿ 4008 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 37 ಅರ್ಧಶತಕಗಳು ಒಳಗೊಂಡಿದ್ದು, ಅಜೇಯ 122 ರನ್ ಗರಿಷ್ಠ ಸ್ಕೋರ್ ಆಗಿದೆ.