ವಿಶ್ವನಾಥ್‌ ಆನಂದ್‌ ರನ್ನು ಚೆಸ್‌ ನಲ್ಲಿ ಸೋಲಿಸಿದ್ರಾ ನಿಖಿಲ್.?‌ ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ

ವಿಶ್ವನಾಥ್‌ ಆನಂದ್‌ ರನ್ನು ಚೆಸ್‌ ನಲ್ಲಿ ಸೋಲಿಸಿದ್ರಾ ನಿಖಿಲ್.?‌ ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ

ಭಾರತದ ಅತ್ಯಂತ ಕಿರಿಯ ಶತಕೋಟ್ಯಧಿಪತಿ ಹಾಗೂ ಜ಼ೆರೋದಾ ಸ್ಥಾಪಕ ನಿಖಿಲ್ ಕಾಮತ್‌ ಚಾರಿಟಿ ಚೆಸ್ ಆಟವೊಂದರಲ್ಲಿ ಗ್ರ‍್ಯಾಂಡ್ ಮಾಸ್ಟರ್‌ ವಿಶ್ಚನಾಥನ್ ಆನಂದ್‌ರನ್ನು ಮಣಿಸಿದ ಬಳಿಕ ಭಾರೀ ಸುದ್ದಿಯಲ್ಲಿದ್ದಾರೆ.

ಕೋವಿಡ್-19 ಸಂತ್ರಸ್ತರಿಗೆ ಉಟದ ವ್ಯವಸ್ಥೆ ಮಾಡಲು ಅಕ್ಷಯ ಪಾತ್ರೆ ಪ್ರತಿಷ್ಠಾನಕ್ಕೆ ನಿಧಿ ಸಂಗ್ರಹಣೆ ಮಾಡುವ ಉದ್ದೇಶದಿಂದ ಈ ಚೆಸ್ ಪಂದ್ಯವನ್ನು ಆಯೋಜಿಸಲಾಗಿದ್ದು, ಆನಂದ್ ಅವರು ಆಮೀರ್‌ ಖಾನ್, ರಿತೇಶ್ ದೇಶ್‌ಮುಖ್ ಸೇರಿದಂತೆ ಹತ್ತು ಮಂದಿ ಸೆಲೆಬ್ರಿಟಿಗಳೊಂದಿಗೆ ಚೆಸ್ ಆಡಬೇಕಿತ್ತು.

ಆಟದಲ್ಲಿ ಆನಂದ್‌ರನ್ನು ಮಣಿಸಲು ಚೀಟಿಂಗ್ ಮಾಡಿದ ಕಾರಣಕ್ಕೆ ಜ಼ೆರೋದಾ ಸ್ಥಾಪಕ ನಿಖಿಲ್ ಕಾಮತ್‌ರ ಪ್ರೊಫೈಲ್‌ ಅಮಾನತುಗೊಳಿಸಲಾಗಿದ್ದು, 'ಸ್ಪೂರ್ತಿಯುತ ಆಟ'ದ ನೀತಿ ಉಲ್ಲಂಘನೆ ಮಾಡಿದ ಆಪಾದನೆ ಎದುರಿಸುತ್ತಿದ್ದಾರೆ. ಸುದ್ದಿ ವೈರಲ್ ಆಗುತ್ತಲೇ ಈ ಬಗ್ಗೆ ಕಾಮತ್‌ ಮೇಲೆ ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕ ವಲಯಗಳಿಂದ ಸಾಕಷ್ಟು ಟೀಕೆಗಳು ಕೇಳಿಬಂದಿವೆ.

ಆದರೆ ತಾವಾಡಿದ ಮ್ಯಾಚ್‌ ಕುರಿತು ಮಾತನಾಡಿದ ಆನಂದ್ ಹಾಗೂ ಕಾಮತ್‌, ಅದೊಂದು ಸಿಮ್ಯೂಲೇಷನ್ ಮಾತ್ರ ಆಗಿತ್ತು ಎಂದಿದ್ದಾರೆ. ಪತ್ರಿಕಾ ಪ್ರಕಟಣೆಯೊಂದನ್ನು ಹಂಚಿಕೊಂಡ ಆನಂದ್, "ನಿಧಿ ಸಂಗ್ರಹಣೆಯ ಉದ್ದೇಶದಿಂದ ಸೆಲೆಬ್ರಿಟಿಗಳೊಂದಿಗೆ ಆಟ ಆಯೋಜಿಸಲಾಗಿತ್ತು. ಅದೊಂದು ಮೋಜಿನ ಅನುಭವವಾಗಿದ್ದು, ಆಟದ ನಿಯಮಗಳಲ್ಲಿ ಸ್ವಲ್ಪ ಸಡಿಲಿಕೆ ಮಾಡಲಾಗಿತ್ತು" ಎಂದಿದ್ದಾರೆ.

"ನಾನು ನಿಜಕ್ಕೂ ವಿಶಿ ಸರ್‌ ರನ್ನು ಚೆಸ್‌ ಆಟದಲ್ಲಿ ಮಣಿಸಿದೆ ಎಂದು ಬಹಳಷ್ಟು ಮಂದಿ ಹೇಳುತ್ತಿರುವುದೇ ವಿಚಿತ್ರ. ನಾನು ಬೆಳಿಗ್ಗೆ ಎದ್ದು ಉಸೇನ್ ಬೋಲ್ಟ್‌ ವಿರುದ್ಧ 100 ಮೀಟರ್‌ ರೇಸ್‌ನಲ್ಲಿ ಗೆದ್ದೆ ಎಂಬಂತೆ ಇದು ಕೇಳಿಸುತ್ತದೆ" ಎಂದು ನಿಖಿಲ್ ಕಾಮತ್‌ ಸ್ಪಷ್ಟನೆ ಕೊಟ್ಟಿದ್ದಾರೆ.