ರಣಜಿ ಕ್ರಿಕೆಟ್: ಫೈನಲ್ ಸನಿಹಕ್ಕೆ ಸೌರಾಷ್ಟ್ರ; ಮಯಂಕ್ ಬಳಗದ ದಾರಿ ಕಡುಕಷ್ಟ

ರಣಜಿ ಕ್ರಿಕೆಟ್: ಫೈನಲ್ ಸನಿಹಕ್ಕೆ ಸೌರಾಷ್ಟ್ರ; ಮಯಂಕ್ ಬಳಗದ ದಾರಿ ಕಡುಕಷ್ಟ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ದಿನಗಳ ಹಿಂದೆ ದ್ವಿಶತಕ ದಾಖಲಿಸಿದ್ದ ಮಯಂಕ್ ಅಗರವಾಲ್, ಕರ್ನಾಟಕ ತಂಡಕ್ಕೆ ರಣಜಿ ಟ್ರೋಫಿ ಫೈನಲ್‌ನಲ್ಲಿ ಆಡುವ ನಿರೀಕ್ಷೆ ಮೂಡಿಸಿದ್ದರು. ಆದರೆ, ಸೌರಾಷ್ಟ್ರದ ನಾಯಕ ಅರ್ಪಿತ್ ವಾಸವಡ ಕೂಡ 'ಇನ್ನೂರು' ರನ್ ಗಳಿಸಿ ಆತಿಥೇಯರ ಹಾದಿಯಲ್ಲಿ ಬಂಡೆಗಲ್ಲಿನಂತೆ ನಿಂತರು.

ಇಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 120 ರನ್‌ಗಳ ಮುನ್ನಡೆ ಗಳಿಸಿದ ಸೌರಾಷ್ಟ್ರ ಫೈನಲ್‌ ಪಂದ್ಯದ ಪ್ರವೇಶದ್ವಾರದ ಸನಿಹದಲ್ಲಿದೆ.

ಶನಿವಾರ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 26.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 123 ರನ್ ಗಳಿಸಿರುವ ಆತಿಥೇಯ ತಂಡವು ಅತ್ಯಂತ ಕಠಿಣ ಹಾದಿಗೆ ಬಂದು ನಿಂತಿದೆ.

ಎರಡನೇ ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಸಮರ್ಥ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ವೇಗಿ ಚೇತನ್ ಸಕಾರಿಯಾ ಕೇಕೆ ಹಾಕಿದರು. ತಮ್ಮ ಎರಡನೇ ಓವರ್‌ನಲ್ಲಿಯೂ ಚೇತನ್ ಎಸೆತವನ್ನು ಆಡುವ ಯತ್ನದಲ್ಲಿ ದೇವದತ್ತ ಪಡಿಕ್ಕಲ್ ಕ್ಲೀನ್‌ಬೌಲ್ಡ್ ಆದರು. ಆಗ ಮಯಂಕ್ ಜೊತೆಗೂಡಿದ ಯುವಪ್ರತಿಭೆ ನಿಕಿನ್ ಜೋಸ್ ಆತ್ಮವಿಶ್ವಾಸಭರಿತ ಆಟವಾಡಿದರು. ಸೌರಾಷ್ಟ್ರದ ಫೀಲ್ಡರ್‌ಗಳನ್ನು ವಂಚಿಸಿ ಬೌಂಡರಿಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. 3ನೇ ವಿಕೆಟ್ ಜೊತೆಯಾಟದಲ್ಲಿ 100 ರನ್ ಸೇರಿಸಿದರು.

ಇವರಿಬ್ಬರೂ ಕ್ರೀಸ್‌ನಲ್ಲಿರುವವರೆಗೂ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಐದ ನೂರಕ್ಕೂ ಹೆಚ್ಚು ಕ್ರಿಕೆಟ್‌ಪ್ರಿಯರಿಗೆ ಮನರಂಜನೆ ಸಿಕ್ಕಿತು. ದಿನದಾಟದ ಅಂತ್ಯಕ್ಕೆ ಇನ್ನೂ ಇಪ್ಪತ್ತು ಎಸೆತಗಳು ಬಾಕಿಯಿದ್ದಾಗ ಮಯಂಕ್ ಸಿಕ್ಸರ್ ಎತ್ತುವ ಪ್ರಯತ್ನದಲ್ಲಿ ಸಕಾರಿಯಾಗೆ ಕ್ಯಾಚಿತ್ತರು. ಇದರೊಂದಿಗೆ ಈ ಋತು ವಿನಲ್ಲಿ ಒಂದು ಸಾವಿರ ರನ್‌ ಗಳಿಸುವ ಅವಕಾಶವನ್ನು ಎಂಟು ರನ್‌ಗಳ ಅಂತರದಿಂದ ಕೈತಪ್ಪಿಸಿಕೊಂಡರು.

ಅಲ್ಲದೇ ಕರ್ನಾಟಕದ ಫೈನಲ್ ಆಸೆಯೂ ಬಹುತೇಕ ಕೈಜಾರಿದಂ ತಾಯಿತು. ಕ್ರೀಸ್‌ಗೆ ಬಂದ ಮನೀಷ್ ಪಾಂಡೆ ದಿನದ ಕೊನೆ ಓವರ್‌ನಲ್ಲಿ ಎಲ್‌ಬಿಡಬ್ಲ್ಯು ಆಗಿ ನಿರ್ಗಮಿಸಿದರು.

ಕರ್ನಾಟಕವು ಫೈನಲ್‌ ಪ್ರವೇಶಿಸಲು ಇನ್ನೊಂದು ಅವಕಾಶ ಇದೆ. ಪಂದ್ಯದ ಕೊನೆಯ ದಿನವಾದ ಭಾನುವಾರ ಕನಿಷ್ಠ 175 ರಿಂದ 200 ರನ್‌ಗಳ ಗುರಿಯನ್ನು ಸೌರಾಷ್ಟ್ರಕ್ಕೆ ಒಡ್ಡಿ, ಆಲೌಟ್ ಮಾಡಬೇಕು. ಆದರೆ ಸಮಯವೂ ಕಡಿಮೆ ಹಾಗೂ ಪ್ರವಾಸಿ ಬಳಗದ ಸಾಮರ್ಥ್ಯದ ಲೆಕ್ಕಹಾಕಿದರೆ ಕರ್ನಾಟಕದ ಹಾದಿ ಕಡುಕಷ್ಟದ್ದು.

ಅರ್ಪಿತ್ ಆಟ: ಸೌರಾಷ್ಟ್ರ ತಂಡದ 34 ವರ್ಷದ ಎಡಗೈ ಬ್ಯಾಟರ್‌ ಅರ್ಪಿತ್‌ಗೆ ಇದು ಕರ್ನಾಟಕದ ಎದುರು ಮೊದಲ ದ್ವಿಶತಕ. ಶುಕ್ರವಾರ ಶೆಲ್ಡನ್ ಜಾಕ್ಸನ್ ಜೊತೆಗೆ ದ್ವಿಶತಕದ ಜೊತೆಯಾಟವಾಡಿ ತಂಡವನ್ನು ಇನಿಂಗ್ಸ್ ಮುನ್ನಡೆಯ ಸನಿಹ ತಂದಿದ್ದರು. ಕರ್ನಾಟಕವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 407 ರನ್‌ಗಳಿಗೆ ಉತ್ತರವಾಗಿ ಸೌರಾಷ್ಟ್ರ 527 ರನ್‌ ಗಳಿಸಲು ಅವರ ದ್ವಿಶತಕ
ನೆರವಾಯಿತು.

ಸುಮಾರು ಆರೂವರೆ ಗಂಟೆಗಳನ್ನು ಕ್ರೀಸ್‌ನಲ್ಲಿ ಕಳೆದ ಅರ್ಪಿತ್ 406 ಎಸೆತಗಳಲ್ಲಿ 202 ರನ್ ಗಳಿಸಿದರು. ಅದರಲ್ಲಿ 21 ಬೌಂಡರಿ ಮತ್ತು ಒಂದು ಸಿಕ್ಸರ್ ಇತ್ತು. ಅವರ ಪಾದಚಲನೆಯ ನಿಖರತೆಗೆ ಬೌಲರ್‌ಗಳು ಬಸವಳಿದರು. ಬೌನ್ಸರ್‌ವೊಂದು ತಮ್ಮ ಹೆಲ್ಮೆಟ್‌ ಅಪ್ಪಳಿಸಿದರೂ ಪ್ರಥಮ ಚಿಕಿತ್ಸೆ ಪಡೆದು ಆಟ ಮುಂದುವರಿಸಿದರು.

ಅದರಲ್ಲೂ ಸ್ಪಿನ್ನರ್‌ಗಳಾದ ಶ್ರೇಯಸ್ ಹಾಗೂ ಗೌತಮ್ ಸೇರಿ ಒಟ್ಟು 229 ರನ್‌ಗಳನ್ನು ಕೊಟ್ಟರು. ಕಳೆದ ಏಳು ಪಂದ್ಯಗಳಲ್ಲಿ 31 ವಿಕೆಟ್ ಗಳಿಸಿದ್ದ ಮಧ್ಯಮವೇಗಿ ವೈಶಾಖ ಈ ಪಂದ್ಯದಲ್ಲಿ ಒಂದೂ ವಿಕೆಟ್ ಪಡೆಯಲಿಲ್ಲ ಹಾಗೂ 119 ರನ್‌ಗಳನ್ನೂ ಬಿಟ್ಟುಕೊಟ್ಟರು.

ಇನಿಂಗ್ಸ್‌ನಲ್ಲಿ 59 ರನ್‌ಗಳ ಮುನ್ನಡೆ ಸಾಧಿಸಿದ್ದಾಗ ಸೌರಾಷ್ಟ್ರದ ಚಿರಾಗ್ ಜಾನಿ ರನ್‌ಔಟ್ ಆದರು. ನಂತರದ 61 ರನ್‌ಗಳ ಅಂತರದಲ್ಲಿ ತಂಡದ ಐದು ವಿಕೆಟ್‌ಗಳು ಪತನವಾದವು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್: ಕರ್ನಾಟಕ: 133.3 ಓವರ್‌ಗಳಲ್ಲಿ 407: ಸೌರಾಷ್ಟ್ರ: 174.4 ಓವರ್‌ಗಳಲ್ಲಿ 527 (ಅರ್ಪಿತ್ ವಾಸವಡ 202, ಚಿರಾಗ್‌ ಜಾನಿ 72; ವಿದ್ವತ್ ಕಾವೇರಪ್ಪ 83ಕ್ಕೆ 5, ಶ್ರೇಯಸ್‌ ಗೋಪಾಲ್‌ 113ಕ್ಕೆ 2). ಎರಡನೇ ಇನಿಂಗ್ಸ್: ಕರ್ನಾಟಕ: 26.4 ಓವರ್‌ಗಳಲ್ಲಿ 4ಕ್ಕೆ123 (ಮಯಂಕ್‌ ಅಗರವಾಲ್‌ 55, ನಿಕಿನ್ ಜೋಸ್‌ ಬ್ಯಾಟಿಂಗ್ 54; ಚೇತನ್ ಸಕಾರಿಯಾ 24ಕ್ಕೆ 2, ಧರ್ಮೇಂದ್ರಸಿಂಹ ಜಡೇಜ 27ಕ್ಕೆ 1, ಪಾರ್ಥ್ ಭುತ್ 41ಕ್ಕೆ 1 )