ಎಂಟಿಬಿ ನಾಗರಾಜ್ ಹೇಳಿಕೆ ಕುರಿತು ತನಿಖೆ : ಎಂ ಬಿ ಪಾಟೀಲ್ ಆಗ್ರಹ
ಬೆಂಗಳೂರು- ಕೆ.ಆರ್.ಪುರಂ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನಂದೀಶ್ ಆತ್ಮಹತ್ಯೆ ಪ್ರಕರಣದಲ್ಲಿ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಅವರ ಹೇಳಿಕೆ ಕುರಿತು ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ.
ಸಚಿವ ಎಂಟಿಬಿ ಹೇಳಿಕೆ ವೈರಲ್ ಆಗಿದೆ. ಎಂಟಿಬಿಯನ್ನ ವಿಚಾರಣೆ ಮಾಡಬೇಕು. ವರ್ಗಾವಣೆಗೆ ಹಣ ಪಡೆಯುವುದು ಅಪರಾಧ, ನಾನೂ ಕೂಡ ಗೃಹ ಸಚಿವನಾಗಿದ್ದೆ. ಆಗ ಒಂದೇ ಒಂದು ಆರೋಪ ಬಂದಿರಲಿಲ್ಲ. ಎಂಟಿಬಿ ನಾಗರಾಜ್ ಸರ್ಕಾರದ ಭಾಗವಾಗಿದ್ದಾರೆ. ಅವರ ಬಳಿ ಏನು ಮಾಹಿತಿ ಇರಬೇಕು. ಇದು ಕಮಿಷನ್ ಸರ್ಕಾರ ಎನ್ನುವುದಕ್ಕೆ ಸಚಿವರ ಹೇಳಿಕೆಯ ಸಾಕ್ಷಿ ಎಂದಿದ್ದಾರೆ.ಈ ಹಿಂದೆ ಸಚಿವ ಜೆ.ಸಿ.ಮಾಧುಸ್ವಾಮಿ ಈ ಸರ್ಕಾರ ನಡೆಯುತ್ತಿಲ್ಲ ಎಂದು ಹೇಳಿದ್ದರು. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಚಾರ ಹೆಚ್ಚಾಗಿದೆ. ಪೊಲೀಸ್ ಅಧಿಕಾರಿಯ ಸಾವಿನ ತನಿಖೆಯಾಗಲಿದೆ ಎಂದು ಒತ್ತಾಯಿಸಿದರು.
ಸಿಎಂ ಕಛೇರಿಯಿಂದ ಪತ್ರಕರ್ತರಿಗೆ ಹಣ ಹಂಚಿಕೆ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಇದೊಂದು ಕೆಟ್ಟ ಸಂಪ್ರದಾಯ. ದೀಪಾವಳಿ ಹಬ್ಬದ ವೇಳೆ ಸಿಹಿ ಹಂಚುವುದು ಸಾಮಾನ್ಯ. ಆದರೆ ಅದರಲ್ಲಿ ಹಣ ಇಟ್ಟು ಕೊಡುವುದು ಅಕ್ಷಮ್ಯ. ಸಿಎಂ ಗಮನಕ್ಕೆ ಇಲ್ಲದೆ ಇದು ಹೇಗೆ ನಡೆಯಲು ಸಾಧ್ಯ. ಆ ದುಡ್ಡು ಎಲ್ಲಿಂದ ಬಂತು. ಯಾರಿಗೆಲ್ಲಾ ಹಣ ಹೋಗಿದೆ. ಯಾರೆಲ್ಲಾ ವಾಪಾಸ್ ನೀಡಿದ್ದಾರೆ ಎಂಬ ವಿಚಾರಗಳೆಲ್ಲಾ ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದರು.