ಪ್ರಧಾನಿ ಭೇಟಿಗೂ ಮೊದಲೇ ಮೋರ್ಬಿ ಆಸ್ಪತ್ರೆಗೆ ಸುಣ್ಣ-ಬಣ್ಣ; ಕಾಂಗ್ರೆಸ್ ಕೆಂಡಾಮಂಡಲ

ಪ್ರಧಾನಿ ಭೇಟಿಗೂ ಮೊದಲೇ ಮೋರ್ಬಿ ಆಸ್ಪತ್ರೆಗೆ ಸುಣ್ಣ-ಬಣ್ಣ; ಕಾಂಗ್ರೆಸ್ ಕೆಂಡಾಮಂಡಲ

ವದೆಹಲಿ, ನವೆಂಬರ್ 01: ತೂಗು ಸೇತುವೆ ಕುಸಿತದ ಸಂತ್ರಸ್ತರನ್ನು ದಾಖಲು ಮಾಡಿರುವ ಗುಜರಾತ್‌ನ ಮೋರ್ಬಿಯ ಸಿವಿಲ್ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಯ ಮುನ್ನ, ದುರಸ್ತಿ ಕಾರ್ಯದ ಕೆಲವು ಚಿತ್ರಗಳನ್ನು ಕಾಂಗ್ರೆಸ್ ಹಾಗೂ ಆಪ್ ಪಕ್ಷಗಳು ಉಲ್ಲೇಖಿಸಿವೆ.

ಆ ಮೂಲಕ ಬಿಜೆಪಿ ವಿರುದ್ಧ ಕಿಡಿ ಕಾರಿವೆ.

ಸಿವಿಲ್ ಆಸ್ಪತ್ರೆಯ ನವೀಕರಣದ ಚಿತ್ರಗಳನ್ನು ಹಂಚಿಕೊಂಡಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿಯವರ ಉತ್ತಮ ಚಿತ್ರಗಳನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದೆ. ದುರಸ್ತಿ ಕಾರ್ಯವನ್ನು "ದುರಂತದ ಘಟನೆ" ಎಂದು ಕರೆದಿರುವ ಕಾಂಗ್ರೆಸ್, "ಅವರಿಗೆ ನಾಚಿಕೆಯಾಗುವುದಿಲ್ಲ! ಅನೇಕ ಜನರು ಸತ್ತರೂ, ಅವರು ತಮ್ಮ ಕಾರ್ಯಕ್ರಮಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ದೂಷಿಸಿದೆ.

ಗುಜರಾತ್‌ನ ಮೋರ್ಬಿಯ ಸಿವಿಲ್ ಆಸ್ಪತ್ರೆಯಲ್ಲಿ 141 ಮಂದಿ ಸಾವನ್ನಪ್ಪಿದ್ದಾರೆ. ನಿಜವಾದ ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಆದರೆ ಬಿಜೆಪಿಯವರು ಫೋಟೋಶೂಟ್ ಮಾಡುವ ಮೂಲಕ ಎಲ್ಲವನ್ನೂ ಮುಚ್ಚಿಡಬೇಕಾಗಿದೆ ಎಂದು ಆಪ್ ಆರೋಪಿಸಿದೆ.


ಸುಣ್ಣ-ಬಣ್ಣ ಹೊಡೆಯುವ ನಡೆಗೆ ಕಾಂಗ್ರೆಸ್ ಕೆಂಡಾಮಂಡಲ

ಒಂದು ಕಡೆ ಮೋರ್ಬಿ ತೂಗು ಸೇತುವೆ ದುರಂತದಲ್ಲಿ ನೂರಾರು ಮಂದಿ ಸಾವಿನ ಮನೆ ಸೇರಿದ್ದಾರೆ. ಇನ್ನೊಂದು ಕಡೆಯಲ್ಲಿ ಪ್ರಧಾನಿ ಮೋದಿ ಭೇಟಿ ನೀಡುತ್ತಾರೆ ಎನ್ನುವು ಆತುರದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಅಲಂಕರಿಸಲಾಗುತ್ತಿದೆ. ಜನರ ಆರೋಗ್ಯಕ್ಕಿಂತ ಪ್ರಧಾನಿ ಮೋದಿ ಫೋಟೋಶೂಟ್ ಮುಖ್ಯವಾಯಿತೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಮೋರ್ಬಿ ಆಸ್ಪತ್ರೆಯಲ್ಲಿ ಪುನರ್ ನಿರ್ಮಾಣ ಹಾಗೂ ಸುಣ್ಣ ಬಣ್ಣ ಬಳೆಯುತ್ತಿರುವ ಫೋಟೋಗಳನ್ನು ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ಉಲ್ಲೇಖಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಗುಜರಾತ್‌ನ ಮೋರ್ಬಿಯ ಸಿವಿಲ್ ಆಸ್ಪತ್ರೆಯ ಗೋಡೆಗಳಿಗೆ ಬಣ್ಣವನ್ನು ಬಳಿಯಲಾಗುತ್ತಿದೆ. "ಮೋರ್ಬಿ ಸಿವಿಲ್ ಆಸ್ಪತ್ರೆಗೆ ರಾತ್ರೋರಾತ್ರಿ ಬಣ್ಣ ಬಳಿಯಲಾಗುತ್ತಿದೆ, ಆದ್ದರಿಂದ ನಾಳೆ ಪ್ರಧಾನಿ ಮೋದಿಯವರ ಫೋಟೋಶೂಟ್ ಸಮಯದಲ್ಲಿ ಕಟ್ಟಡದ ಕಳಪೆ ಸ್ಥಿತಿಯು ಬಹಿರಂಗಗೊಳ್ಳುವುದಿಲ್ಲ" ಎಂದು ಎಎಪಿ ಹಿಂದಿಯಲ್ಲಿ ಹೇಳಿದೆ.

141 ಜನರ ಬಲಿ ತೆಗೆದುಕೊಂಡ ತೂಗು ಸೇತುವೆ

ಸೌರಾಷ್ಟ್ರ ಪ್ರದೇಶದ ಮೊರ್ಬಿ ಪಟ್ಟಣದಲ್ಲಿ ಭಾನುವಾರ ಸಂಜೆ ಬ್ರಿಟಿಷರ ಕಾಲದ ತೂಗು ಸೇತುವೆ ಕುಸಿದು ಬಿದ್ದ ಘಟನೆಯಲ್ಲಿ ಕನಿಷ್ಠ 141 ಜನರು ಸಾವನ್ನಪ್ಪಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ ತಾಂತ್ರಿಕ ಮತ್ತು ರಚನಾತ್ಮಕ ದೋಷಗಳು ಮತ್ತು ಕೆಲವು ನಿರ್ವಹಣೆ ಸಮಸ್ಯೆಗಳು ದುರಂತಕ್ಕೆ ಪ್ರಾಥಮಿಕವಾಗಿ ಕಾರಣವಾಗಿವೆ ಎಂದು ಪೊಲೀಸರು ತಿಳಿಸಿದ್ದರು.

"ತಾಂತ್ರಿಕ ಮತ್ತು ರಚನಾತ್ಮಕ ದೋಷಗಳು, ಪ್ರಮಾಣೀಕರಣದ ಕೊರತೆ ಮತ್ತು ಕೆಲವು ನಿರ್ವಹಣೆ ಸಮಸ್ಯೆಗಳು ದುರಂತಕ್ಕೆ ಕಾರಣವಾಗಿವೆ ಎಂದು ನಮ್ಮ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ" ಎಂದು ರಾಜ್‌ಕೋಟ್ ರೇಂಜ್ ಐಜಿ ಅಶೋಕ್ ಕುಮಾರ್ ಯಾದವ್ ಸುದ್ದಿಗಾರರಿಗೆ ತಿಳಿಸಿದರು.

ಉನ್ನತ ಮಟ್ಟದ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ

ಮೊರ್ಬಿ ಸೇತುವೆ ಕುಸಿತದ ಕುರಿತು ಸೋಮವಾರ ತಡರಾತ್ರಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಿದ್ದರು. ಈ ದುರಂತದಿಂದ ಸಂತ್ರಸ್ತರಾದವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಅಪಘಾತದ ಸ್ಥಳದಲ್ಲಿ ಕೈಗೊಂಡಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಕುರಿತು ಪ್ರಧಾನಿಗೆ ಮಾಹಿತಿ ನೀಡಲಾಯಿತು ಮತ್ತು ದುರಂತಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳ ಬಗ್ಗೆ ಚರ್ಚಿಸಲಾಯಿತು.