ಎಸ್‌ಸಿ, ಎಸ್‌ಟಿ ನೌಕರರಿಗೆ ಕಾನೂನುಬದ್ಧವಾಗಿ ಮುಂಬಡ್ತಿ: ವಂದಿತಾ ಶರ್ಮ ಭರವಸೆ

ಎಸ್‌ಸಿ, ಎಸ್‌ಟಿ ನೌಕರರಿಗೆ ಕಾನೂನುಬದ್ಧವಾಗಿ ಮುಂಬಡ್ತಿ: ವಂದಿತಾ ಶರ್ಮ ಭರವಸೆ

ಬೆಂಗಳೂರು: 'ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ ವರ್ಗದ  ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ವೇಳೆ ಕಾಯ್ದೆ, ನಿಯಮಗಳನ್ನು ಪಾಲಿಸುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು' ಎಂದು ಎಸ್‌ಸಿ, ಎಸ್‌ಟಿ ಸರ್ಕಾರಿ ನೌಕರರ ಸಂಘದ ನಿಯೋಗಕ್ಕೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಭರವಸೆ ನೀಡಿದ್ದಾರೆ.

ಬಿ.ಕೆ. ಪವಿತ್ರ ತೀರ್ಪು 1 ಮತ್ತು 2 ಸಂಬಂಧ ಮೀಸಲಾತಿ ನಿಗದಿಪಡಿಸುವಂತೆ ಸಲ್ಲಿಸಿದ್ದ ಮನವಿಯ ಕುರಿತಂತೆ ಸಂಘದ ಪದಾಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಿದ ಅವರು, 'ಕಾನೂನುಬದ್ಧವಾಗಿ ಮುಂಬಡ್ತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗುವುದು' ಎಂದಿದ್ದಾರೆ.

ವಿವಿಧ ಇಲಾಖೆಗಳಲ್ಲಿ ಮುಂಬಡ್ತಿಯಲ್ಲಿ ನೀಡುವ ವೇಳೆ ಎಸ್‌ಸಿ, ಎಸ್‌ಟಿ ನೌಕರರಿಗೆ ಅನ್ಯಾಯ ಎಸಗಲಾಗಿದೆ ಎಂಬ ಸಮಗ್ರ ವಿವರಗಳನ್ನು ಒಳಗೊಂಡ 58 ಪುಟಗಳ ಮನವಿಯನ್ನು ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ಅವರು ಮುಖ್ಯಕಾರ್ಯದರ್ಶಿಗೆ ಸಲ್ಲಿಸಿದರು.

'ರಾಜ್ಯದಲ್ಲಿ ಜ್ಯೇಷ್ಠತೆ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದೆ. ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ಕೂಡಾ ಎತ್ತಿ ಹಿಡಿದಿದೆ. ಆದರೆ, ವಿವಿಧ ಇಲಾಖೆಗಳಲ್ಲಿ ಎಸ್‌ಸಿ, ಎಸ್‌ಟಿ ನೌಕರರ ಜ್ಯೇಷ್ಠತೆ ನಿಗದಿಪಡಿಸುವಾಗ ತಪ್ಪು ಮಾಡಲಾಗಿದೆ. ಅಲ್ಲದೆ, ಬಡ್ತಿ ನೀಡುವಾಗ ಮೀಸಲಾತಿ ನಿಯಮವನ್ನು ಪಾಲಿಸದೆ ವಂಚಿಸಲಾಗಿದೆ. ಈ ಅನ್ಯಾಯವನ್ನು ಸರಿಪಡಿಸಬೇಕು' ಎಂದು ಅವರು ಆಗ್ರಹಿಸಿದರು.

'ನೌಕರರ ಜ್ಯೇಷ್ಠತೆಯನ್ನು ನಿಗದಿಪಡಿಸುವ ಸಂದರ್ಭದಲ್ಲಿ ತಪ್ಪು ಆಗಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಕೆಲವು ಇಲಾಖೆಗಳಲ್ಲಿ ಬಡ್ತಿ ಪಡೆಯಲು ಅರ್ಹ ಎಸ್‌ಸಿ, ಎಸ್‌ಟಿ ನೌಕರರು ಇದ್ದರೂ ಮುಂಬಡ್ತಿ ನೀಡಲು ಕ್ರಮ ತೆಗೆದುಕೊಂಡಿಲ್ಲ. ಜ್ಯೇಷ್ಠತೆ, ಅರ್ಹತೆ ಇದ್ದರೂ ಪರಿಶಿಷ್ಟ ನೌಕರರನ್ನು ಹಲವು ಇಲಾಖೆಗಳಲ್ಲಿ ಬಡ್ತಿಯಿಂದ ಹೊರಗಿಡಲಾಗಿದೆ. ಬಡ್ತಿ ನೀಡುವಂತೆ ಕೋರ್ಟ್‌ ಆದೇಶ ನೀಡಿದ್ದರೂ ಕೆಲವು ಇಲಾಖೆಗಳು ಅದನ್ನು ಪಾಲಿಸಿಲ್ಲ' ಎಂದು ಸಂಘದ ನಿಯೋಗ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತಂದಿದೆ.

'ಮೀಸಲಾತಿ ವಂಚಿತ ನೌಕರರು, ಸ್ಥಾನಮಾನ ಸಿಗದ ಕಾರಣಕ್ಕೆ ಸಾಮಾಜಿಕವಾಗಿ ಹಾಗೂ ಬಡ್ತಿಯಿಂದ ವೇತನ ಹೆಚ್ಚಳಗೊಳ್ಳುವುದರಿಂದ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಈ ವಿಚಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ದೌರ್ಜನ್ಯ ಕಾಯ್ದೆಯಡಿ ಬರುತ್ತದೆ. ಪರಿಶಿಷ್ಟ ನೌಕರರಿಗೆ ಅನ್ಯಾಯ ಮಾಡಿದ ಅಧಿಕಾರಿಗಳ ವಿರುದ್ಧ ಈ ಕಾಯ್ದೆಯಡಿ ದೂರುದಾಖಲಿಸಲು ಅವಕಾಶ ಇದೆ. ಹೀಗಾಗಿ, ತಪ್ಪು ಎಸಗುವ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಬೇಕು' ಎಂದೂ ನಿಯೋಗ ಆಗ್ರಹಿಸಿದೆ.