ಶಿವಲಿಂಗೇಗೌಡ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ರೇವಣ್ಣ
ಅರಸೀಕೆರೆ (ಹಾಸನ ಜಿಲ್ಲೆ): 'ನನ್ನೊಂದಿಗೆ ನಡೆಸಿದ ಪೋನ್ ಸಂಭಾಷಣೆ ಸುಳ್ಳು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ' ಎಂದು ಶಾಸಕ ಎಚ್.ಡಿ.ರೇವಣ್ಣ ಸವಾಲು ಹಾಕಿದರು.
ಭಾನುವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, 'ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ' ಎಂದು ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡಿರುವುದು ಸುಳ್ಳೆಂದು ಸಾಬೀತುಪಡಿಸಲಿ' ಎಂದರು.
'ಅರಸೀಕೆರೆ ಕ್ಷೇತ್ರದಲ್ಲಿಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಮುಖ ನೋಡಿ ಯಾರೂ ಜೆಡಿಎಸ್‌ಗೆ ಮತ ಹಾಕುವುದಿಲ್ಲ ಎಂದು ಶಿವಲಿಂಗೇಗೌಡ ಅವರು ದೇವೇಗೌಡರ ಸಮ್ಮುಖದಲ್ಲೇ ಹೇಳಿದ್ದು ಎಲ್ಲರಿಗೂ ನೋವಿದೆ' ಎಂದು ಹೇಳಿದರು.
'ಶಿವಲಿಂಗೇಗೌಡಗೆ ₹ 250 ಕೋಟಿ ಗುತ್ತಿಗೆ ಕೆಲಸ ಕೊಡಿಸಿದ್ದೆ. ಆ ಬಗ್ಗೆ ಸದ್ಯದಲ್ಲೇ ಹೆಚ್ಚಿನ ವಿವರ ನೀಡುತ್ತೇನೆ. ಶಿವಲಿಂಗೇಗೌಡ ಅದೇನು ಬಿಚ್ಚಿಡುತ್ತಾರೋ ಬಿಚ್ಚಡಲಿ. 15 ವರ್ಷ ಶಾಸಕರನ್ನಾಗಿ ಬೆಳೆಸಿದ್ದಕ್ಕೆ ಮೋಸ ಮಾಡಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ' ಎಂದು ಟೀಕಿಸಿದರು.