ಅಕ್ಷರ ಸಂತ ಹಾಜಬ್ಬನ ಶಾಲೆಗೆ ದೇಣಿಗೆ ನೀಡಿದ ತುಳಸಿ ಗೌಡ

ಉಳ್ಳಾಲ: ಅಕ್ಷರ ಸಂತ ಹಾಜಬ್ಬ ಅವರನ್ನು ಭೇಟಿಯಾಗಬೇಕು, ಅವರ ಶಾಲೆಗೆ ಕಿಂಚಿತ್ತಾದರೂ ದೇಣಿಗೆ ನೀಡಬೇಕು…
ಇದು ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ 82ರ ಹಿರಿಯಜ್ಜಿ ಅಂಕೋಲಾದ ತುಳಸಿ ಗೌಡ ಅವರ ಮನದಿಚ್ಛೆಯಾಗಿತ್ತು. ಅದರಂತೆ ಶನಿವಾರ ಬೆಳಗ್ಗೆ ಹರೇಕಳ ಹಾಜಬ್ಬ ಆವರ ಮನೆಗೆ ತನ್ನ ಕುಟುಂಬದ ಮೂವರು ಸದಸ್ಯರೊಂದಿಗೆ ಆಗಮಿಸಿದ ತುಳಸಿ ಅವರು ಹಾಜಬ್ಬರ ಮನೆಗೆ ಬಳಿಕ ಹಾಜಬ್ಬರ ಸರಕಾರಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಕಳೆದುದಲ್ಲದೆ ಕಿಂಚಿತ್ ದೇಣಿಗೆ ನೀಡುವ ಮೂಲಕ ಧನ್ಯತೆ ಮೆರೆದರು.
ಪದ್ಮಶ್ರೀ ಸ್ವೀಕಾರಕ್ಕೆಂದು ದಿಲ್ಲಿಗೆ ತೆರಳುವಾಗ ಹಾಜಬ್ಬರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದ ತುಳಸಿ ಅವರಿಗೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ದಿಲ್ಲಿಯಲ್ಲಿ ಹಾಜಬ್ಬ ಹೊಟೇಲ್‌ನಲ್ಲಿ ತಂಗಿದ್ದರೆ, ತುಳಸಿ ಕರ್ನಾಟಕ ಭವನದಲ್ಲಿ ತಂಗಿದ್ದರು. ಹಾಜಬ್ಬ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಂಗಳೂರಿಗೆ ಆಗಮಿಸಿದರೆ ತುಳಸಿ ಗೌಡ ದಿಲ್ಲಿಯಲ್ಲಿ ನಡೆದ ಸಮ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನಿಂದ ಅಂಕೋಲಾಕ್ಕೆ ಹೋಗುವ ಮೊದಲು ಹಾಜಬ್ಬರ ಶಾಲೆಗೆ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದ್ದರು. ಶುಕ್ರವಾರ ಮಂಗಳೂರಿಗೆ ತಲುಪಿ ಶನಿವಾರ ಬೆಳಗ್ಗೆ 9.30ಕ್ಕೆ ಹಾಜಬ್ಬರ ಮನೆಗೆ ಭೇಟಿ ನೀಡಿದರು.
ಹರೇಕಳದ ನ್ಯೂಪಡು³ ಮನೆಗೆ ಬಂದ ಪದ್ಮಶ್ರೀ ತುಳಸಿ ಗೌಡರನ್ನು ಹಾಜಬ್ಬರು ಸ್ವಾಗತಿಸಿ ಕಾರಿನಿಂದ ಸ್ವತಃ ತಾವೇ ಇಳಿಸಿ ಮನೆಯೊಳಗೆ ಕರೆದುಕೊಂಡು ಹೋಗಿ ಗೌರವಿಸಿದರು. ಬೆಳಗ್ಗಿನ ಉಪಾಹಾರ ನೀಡಿ ಶಾಲೆ ಆರಂಭದಿಂದ ಪದ್ಮಶ್ರೀ ಪುರಸ್ಕಾರ ಸ್ವೀಕಾರ ವರೆಗಿನ ವಿಚಾರಗಳನ್ನು ತಿಳಿಸಿದರು. ವಿವಿಧ ಸಂಘ-ಸಂಸ್ಥೆಗಳು ಮತ್ತು ಸರಕಾರದಿಂದ ಲಭಿಸಿದ ಗೌರವದ ಫಲಕಗಳನ್ನು ತೋರಿಸಿದರು.
ತುಳಸಿ ಗೌಡ ನೀಡಿದ ದೇಣಿಗೆ ಸ್ವೀಕರಿಸಿ ಮಾತನಾಡಿದ ಹಾಜಬ್ಬ, ನನಗೆ ಇದು ಅತ್ಯಪೂರ್ವ ಕ್ಷಣ. ಹಿರಿಯಾಕೆ ತುಳಸಿ ಗೌಡರು ನಮ್ಮ ಮನೆ ಹಾಗೂ ಶಾಲೆಗೆ ಬಂದಿರುವುದು ಸಂತಸ ತಂದಿದೆ. ಅವರು ನೀಡಿದ ಮೊತ್ತವನ್ನು ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಇಲ್ಲಿಗೆ ಪದವಿ ಪೂರ್ವ ಕಾಲೇಜು ಮಂಜೂರುಗೊಳ್ಳುವ ಆಶಯ ಬೇಗನೆ ಈಡೇರಲಿ ಎಂದರು.
“ವೃಕ್ಷಮಾತೆ’ಯ ಆಶೀರ್ವಾದ :
ಶಾಲೆಗೆ ಆಗಮಿಸಿದ ತುಳಸಿ ಗೌಡ ಅವರಿಗೆ ವಿದ್ಯಾರ್ಥಿಗಳು ಸಂಭ್ರಮದ ಸ್ವಾಗತ ನೀಡಿದರು. ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠ ಹಾಗೂ ಭಕ್ತರು ಸಂಗ್ರಹಿಸಿ ನೀಡಿದ್ದ ದೇಣಿಗೆಯಲ್ಲಿ ಒಂದು ಪಾಲನ್ನು ತುಳಸಿ ಗೌಡ ಅವರಿಗೆ ಹಾಜಬ್ಬರ ಶಾಲೆಗೆ ದೇಣಿಗೆಯಾಗಿ ನೀಡಿದಾಗ ಹಾಜಬ್ಬ ಸ್ವೀಕರಿಸಿ ಕಾಲು ಮುಟ್ಟಿ ನಮಸ್ಕರಿಸಿದರು. ತುಳಸಿ ಅವರು ಹಾಜಬ್ಬರ ತಲೆಗೆ ಕೈಇರಿಸಿ ಆಶೀರ್ವದಿಸಿದರು. ಬಳಿಕ ಮಾತನಾಡಿದ ತುಳಸಿ, ಶಾಲೆಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಸರಕಾರ ಹಾಜಬ್ಬರ ಪದವಿ ಪೂರ್ವ ಕಾಲೇಜು ತೆರೆಯುವ ಆಸೆಯನ್ನು ಈಡೇರಿಸಬೇಕು ದಾನಿಗಳು ಅವರನ್ನು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಗಿಡ ನೆಡುವ ಮೂಲಕ ಪರಿಸರ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.