ಟಾಲಿವುಡ್ ನಟ ರಾಣಾ ದಗ್ಗುಬಾಟಿ ಕಚೇರಿಯಲ್ಲಿ ಅಪ್ಪು ಪುತ್ಥಳಿ

ಟಾಲಿವುಡ್ ನಟ ರಾಣಾ ದಗ್ಗುಬಾಟಿ ಕಚೇರಿಯಲ್ಲಿ ಅಪ್ಪು ಪುತ್ಥಳಿ

ರ್ನಾಟಕ ರತ್ನ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ಎಂದೂ ತುಂಬಲಾರದ ನಷ್ಟ. ಪುನೀತ್‌ ರಾಜ್‌ಕುಮಾರ್‌ ನಮ್ಮನ್ನಗಲಿ ಒಂದು ವರ್ಷ ಸಮೀಪಿಸುತ್ತಿದ್ದು, ಜನರಿಗೆ ಅವರ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಪ್ರತಿನಿತ್ಯ ಸಾವಿರಾರು ಅಭಿಮಾನಿಗಳು ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿ ಸ್ಥಳಕ್ಕೆ ಭೇಟಿ ನಮನ ಸಲ್ಲಿಸುತ್ತಿರುತ್ತಾರೆ.

ಕೇವಲ ನಟನೆಯಿಂದ ಮಾತ್ರವಲ್ಲ, ಪುನೀತ್‌ ರಾಜ್‌ಕುಮಾರ್‌ ತಮ್ಮ ಸಾಮಾಜಿಕ ಕಳಕಳಿ, ಸಮಾಜ ಸೇವೆಯ ಮೂಲಕ ಕನ್ನಡಿಗರ ಮನದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ. ಅಪ್ಪು ಅಗಲಿಕೆ ನೋವಿನಿಂದ ಹೊರಬಾರದ ಅಭಿಮಾನಿಗಳು ಅವರ ಹೆಸರಿನಲ್ಲಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ಪುನೀತ್‌ ರಾಜ್‌ಕುಮಾರ್ ಅವರ ಸವಿ ನೆನಪಿಗಾಗಿ ಅನೇಕ ಕಡೆಗಳಲ್ಲಿ ಅಪ್ಪು ಪುತ್ಥಳಿಕೆಗಳನ್ನು ಅನಾವರಣಗೊಳಿಸಲಾಗಿದೆ.

ಭಾರತೀಯ ಚಿತ್ರರಂಗದಲ್ಲಿ ಅಪ್ಪು ಹೆಸರು ಅಮರವಾಗಿದ್ದು, ಸ್ಯಾಂಡಲ್‌ವುಡ್‌ ನಟ,ನಟಿಯರು ಮಾತ್ರವಲ್ಲದೆ ಇತರ ಭಾಷೆಯ ಸಿನಿಮಾ ತಾರೆಯರೊಂದಿಗೆ ಕೂಡ ಪುನೀತ್‌ ರಾಜ್‌ಕುಮಾರ್ ಉತ್ತಮ ಬಾಂಧವ್ಯ ಹೊಂದಿದ್ದರು. ಅಪ್ಪು ಅಗಲಿದ ಮೇಲೆ ಅನೇಕ ಇತರ ಭಾಷೆಯ ಸೆಲೆಬ್ರೆಟಿಗಳು ಆಗಾಗ ಅವರೊಂದಿಗಿನ ನೆನಪುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಪ್ಪು ಸ್ನೇಹ ಅಮರ ಎನ್ನುವುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.

ಟಾಲಿವುಡ್‌ ನಟ ರಾಣಾ ದಗ್ಗುಬಾಟಿ ತಮ್ಮ ಹಾಗೂ ಪುನೀತ್ ರಾಜ್‌ಕುಮಾರ್‌ ಅವರ ಸ್ನೇಹದ ಬಗ್ಗೆ ವಿಶೇಷ ವಿಚಾರವೊಂದನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಣಾ ದಗ್ಗುಬಾಟಿ ಅವರ ಕಚೇರಿಯಲ್ಲಿ ಅಪ್ಪು ಪುತ್ಥಳಿಕೆಯನ್ನು ಇರಿಸಲಾಗಿದೆ. ಈ ಸಂತೋಷದ ವಿಷಯವನ್ನು ರಾಣಾ ದಗ್ಗುಬಾಟಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಕಚೇರಿಯಲ್ಲಿರುವ ಪುನೀತ್ ರಾಜ್‌ಕುಮಾರ್‌ ಪುತ್ಥಳಿಕೆ ಫೋಟೋ ಶೇರ್‌ ಮಾಡಿರುವ ರಾಣಾ ದಗ್ಗುಬಾಟಿ, ತುಂಬ ಸುಂದರವಾದ ಸ್ಮರಣಿಕೆ ಇಂದು ನನ್ನ ಕಚೇರಿಗೆ ಬಂತು. ಮಿಸ್​ ಯೂ ನನ್ನ ಗೆಳೆಯ​ ಪುನೀತ್​ ರಾಜ್​ಕುಮಾರ್ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ರಾಣಾ ದಗ್ಗುಬಾಟಿ ಟ್ವೀಟ್‌ಗೆ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅನೇಕರು ಈ ಪೋಸ್ಟ್‌ ಅನ್ನು ಶೇರ್‌ ಮಾಡಿದ್ದಾರೆ.

ಇನ್ನು ಪುನೀತ್‌ ರಾಜ್‌ಕುಮಾರ್ ಅಗಲಿಕೆಯ ಬಳಿಕವೂ ಅವರು ಅಭಿನಯದ ಜೇಮ್ಸ್‌ ಹಾಗೂ ಲಕ್ಕಿ ಮ್ಯಾನ್‌ ಚಿತ್ರಗಳು ತೆರೆಕಂಡಿದ್ದು, ತೆರೆ ಮೇಲೆ ಅಪ್ಪು ನೋಡಿ ಅಭಿಮಾನಿಗಳು ಕಣ್ಣೀರಿಟ್ಟಿದ್ದರು. ಇದೀಗ ಮತ್ತೊಮ್ಮೆ ಪುನೀತ್‌ ರಾಜ್‌ಕುಮಾರ್ ಅವರನ್ನು ಬೆಳ್ಳಿ ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳುವ ಕ್ಷಣಗಳು ಸಮೀಪಿಸುತ್ತಿದೆ. ಪುನೀತ್‌ ರಾಜ್‌ಕುಮಾರ್ ತಾವೇ ಸ್ವತಃ ಮುತುವರ್ಜಿ ವಹಿಸಿ ಮಾಡಿರುವ ಗಂಧದ ಗುಡಿ ಡಾಕ್ಯುಮೆಂಟರಿ ತೆರೆ ಕಾಣಲು ಸಜ್ಜಾಗಿದೆ. ಇದೇ ಅಕ್ಟೋಬರ್ 9ರಂದು ಗಂಧದ ಗುಡಿ ಡಾಕ್ಯುಮೆಂಟರಿಯ ಟ್ರೈಲರ್‌ ಪಿಆರ್‌ಕೆ ಆಡಿಯೋಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಬಳಿಕ ಈ ತಿಂಗಳ ಅಂತ್ಯದಲ್ಲಿ ಗಂಧದ ಗುಡಿ ಡಾಕ್ಯುಮೆಂಟರಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಕೊನೆಯ ಬಾರಿ ಪುನೀತ್‌ ರಾಜ್‌ಕುಮಾರ್ ಅವರನ್ನು ಬೆಳ್ಳಿ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.