ನಾಳೆಯೇ 2 ಸೆಮಿಫೈನಲ್ ಪಂದ್ಯ; ಯಾವ ತಂಡಗಳು ಭಾಗಿ, ನೇರಪ್ರಸಾರ ವೀಕ್ಷಿಸುವುದು ಹೇಗೆ?

ನಾಳೆಯೇ 2 ಸೆಮಿಫೈನಲ್ ಪಂದ್ಯ; ಯಾವ ತಂಡಗಳು ಭಾಗಿ, ನೇರಪ್ರಸಾರ ವೀಕ್ಷಿಸುವುದು ಹೇಗೆ?

ಸಿನಿ ರಸಿಕರ ಹಾಗೂ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಮನರಂಜನಾ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಮೆಂಟ್‌ನ ಹತ್ತನೇ ಆವೃತ್ತಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಫೆಬ್ರವರಿ 18ರಂದು ಆರಂಭವಾದ ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯ ಲೀಗ್ ಹಂತ ಮಾರ್ಚ್ 12ರಂದು ಮುಕ್ತಾಯಗೊಂಡಿದೆ.

ಲೀಗ್ ಹಂತದಲ್ಲಿ 16 ಪಂದ್ಯಗಳು ನಡೆದಿವೆ.

ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್, ತೆಲುಗು ಟೈಟಾನ್ಸ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೊಸ್ ಹಾಗೂ ಪಂಜಾಬ್ ದೆ ಶೇರ್ ಸೇರಿದಂತೆ ಒಟ್ಟು ಎಂಟು ತಂಡಗಳು ಕಣಕ್ಕಿಳಿದಿದ್ದು, ಎಲ್ಲಾ ತಂಡಗಳೂ ಲೀಗ್ ಹಂತದಲ್ಲಿ ತಲಾ ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು ಹೆಚ್ಚು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನಗಳನ್ನು ಪಡೆದುಕೊಂಡಿರುವ ತಂಡಗಳು ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿವೆ.

ಹೌದು, ನಾಲ್ಕು ಪಂದ್ಯಗಳನ್ನಾಡಿ ಎಲ್ಲಾ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವ ಕರ್ನಾಟಕ ಬುಲ್ಡೋಜರ್ಸ್, ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಭೋಜ್‌ಪುರಿ ದಬಾಂಗ್ಸ್, ನಾಲ್ಕು ಪಂದ್ಯಗಳನ್ನಾಡಿ ಮೂರು ಪಂದ್ಯಗಳನ್ನು ಗೆದ್ದು ಉಳಿದೊಂದು ಪಂದ್ಯದಲ್ಲಿ ಸೋತು ಮೂರನೇ ಸ್ಥಾನದಲ್ಲಿರುವ ಮುಂಬೈ ಹೀರೊಸ್ ಹಾಗೂ ನಾಲ್ಕು ಪಂದ್ಯಗಳನ್ನಾಡಿ ಎರಡು ಪಂದ್ಯಗಳನ್ನು ಗೆದ್ದು ಉಳಿದೆರಡು ಪಂದ್ಯಗಳಲ್ಲಿ ಸೋತು ನಾಲ್ಕನೇ ಸ್ಥಾನದಲ್ಲಿರುವ ತೆಲುಗು ವಾರಿಯರ್ಸ್ ಸೆಮಿ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿವೆ.

ಉಳಿದ ತಂಡಗಳಾದ ಚೆನ್ನೈ ರೈನೊಸ್, ಪಂಜಾಬ್ ದೆ ಶೇರ್, ಬೆಂಗಾಲ್ ಟೈಗರ್ಸ್ ಹಾಗೂ ಕೇರಳ ಸ್ಟ್ರೈಕರ್ಸ್ ತಂಡಗಳು ಕ್ರಮವಾಗಿ ಅಂಕಪಟ್ಟಿಯಲ್ಲಿ 5,6,7 & 8ನೇ ಸ್ಥಾನಗಳನ್ನು ಪಡೆದುಕೊಳ್ಳುವುದರ ಮೂಲಕ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿವೆ. ಇನ್ನು ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿರುವ ತಂಡಗಳು ನಾಳೆ ( ಮಾರ್ಚ್ 24 ) ನಡೆಯಲಿರುವ ಸೆಮಿ ಫೈನಲ್ ಪಂದ್ಯಗಳಲ್ಲಿ ಸೆಣಸಾಡಲಿವೆ.

ಮೊದಲ ಸೆಮಿಫೈನಲ್ ಪಂದ್ಯ ನಾಳೆ ಮಧ್ಯಾಹ್ನ ವಿಶಾಖಪಟ್ಟಣದ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ ನಡೆಯಲಿದ್ದು, ಈ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಭೋಜ್‌ಪುರಿ ದಬಾಂಗ್ಸ್ ಹಾಗೂ ಮೂರನೇ ಸ್ಥಾನ ಪಡೆದುಕೊಂಡಿದ್ದ ಮುಂಬೈ ಹೀರೋಸ್ ತಂಡಗಳು ಮುಖಾಮುಖಿಯಾಗಲಿವೆ. ಇದೇ ದಿನ ಇದೇ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದ ಹಾಗೂ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದ್ದ ತೆಲುಗು ವಾರಿಯರ್ಸ್ ಮುಖಾಮುಖಿಯಾಗಲಿವೆ.

ಈ ಎರಡೂ ಪಂದ್ಯಗಳಲ್ಲಿ ಗೆಲ್ಲಲಿರುವ ತಂಡಗಳು ಮಾರ್ಚ್ 25ರ ಶನಿವಾರದಂದು ವಿಶಾಖಪಟ್ಟಣದ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ. ಇನ್ನು ಸೆಮಿಫೈನಲ್ ಪಂದ್ಯಗಳ ನೇರಪ್ರಸಾರವನ್ನು ಜೀ ಫೈವ್ ಅಪ್ಲಿಕೇಶನ್ ಹಾಗೂ ಜೀ ಪಿಚ್ಚರ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ.