ಕರ್ನಾಟಕದ ಅಂಗನವಾಡಿ ಕೇಂದ್ರಗಳಿಗೆ 18 ಲಕ್ಷ ಪುಟಾಣಿಗಳು ದಾಖಲು!

ಕರ್ನಾಟಕದ ಅಂಗನವಾಡಿ ಕೇಂದ್ರಗಳಿಗೆ 18 ಲಕ್ಷ ಪುಟಾಣಿಗಳು ದಾಖಲು!

ಬೆಂಗಳೂರು, ನ. 08: ಕೊರೊನಾ ಕರಿ ನೆರಳು ಕಡಿಮೆಯಾದ ಬೆನ್ನಲ್ಲಿ ರಾಜ್ಯದಲ್ಲಿ ಇಂದಿನಿಂದ ಅಂಗನವಾಡಿ ಕೇಂದ್ರಗಳು ಬಾಗಿಲು ತೆರೆದಿವೆ. ಪೌಷ್ಠಿಕ ಆಹಾರದ ಜತೆಗೆ ಅಕ್ಷರ ಕಲಿಯುವ ಅಂಗನವಾಡಿ ಕೇಂದ್ರಗಳಿಗೆ ಸ್ವಯಂ ಪ್ರೇರಿತವಾಗಿ ಮಕ್ಕಳು ಬರುತ್ತಿದ್ದಾರೆ. ರಾಜ್ಯದಲ್ಲಿ 66,261 ಅಂಗನವಾಡಿ ಕೇಂದ್ರಗಳು ಇದ್ದು, ಕೋವಿಡ್ ಸುರಕ್ಷತಾ ನಿಯಮಗಳೊಂದಿಗೆ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ.

ಅಂಗನವಾಡಿಗಳಲ್ಲಿ ಕಲಿಕೆಯಿಂದ ದೂರ ಉಳಿದಿದ್ದ ಸುಮಾರು 18 ಲಕ್ಷ ಮಕ್ಕಳು ಮರಳಿ ಅಂಗನವಾಡಿ ಕೇಂದ್ರಗಳಿಗೆ ಅಗಮಿಸಲಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ 2019 ಫೆಬ್ರವರಿಯಲ್ಲಿಯೇ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು. ಶಿಶುಗಳಿಗೆ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಭಾಗವಾಗಿ ಬಂದ್ ಮಾಡಿದ್ದ ಅಂಗನವಾಡಿ ಕೇಂದ್ರಗಳು ಸುಮಾರು 20 ತಿಂಗಳು ಆದರೂ ತೆರೆದಿರಲಿಲ್ಲ. ಇದೀಗ ನ. 08 ರಿಂದ ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯುವಂತೆ ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ. ಕೊರೊನಾ ಮಾರ್ಗಸೂಚಿ ಅನ್ವಯ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆರು ತಿಳಿಸಿದ್ದಾರೆ.


ಎರಡು ವರ್ಷದಿಂದ ಅಂಗನವಾಡಿ ಕೇಂದ್ರ ತೆರೆದಿಲ್ಲ

ಎಲ್ಲಾ ಮಕ್ಕಳು ಖುಷಿಯಿಂದಲೇ ಬರುತ್ತಿದ್ದಾರೆ. ಸುಮಾರು ಎರಡು ವರ್ಷದಿಂದ ಅಂಗನವಾಡಿ ಕೇಂದ್ರಗಳನ್ನು ತೆರೆದಿರಿಲ್ಲ. ಹೀಗಾಗಿ ಕುಡಿಯುವ ನೀರು, ಕೊರೊನಾ ಮಾರ್ಗಸೂಚಿ ಪಾಲನೆ ಮಾಡಲು ಅಗತ್ಯ ಇರುವ ಸಲಕರಣೆಗಳು ತುರ್ತು ಅಗತ್ಯವಿದೆ. ಮಕ್ಕಳ ಆರೋಗ್ಯ ತಪಾಸಣೆ ಮಾಡುವ ಡಿಜಿಟಲ್ ಥರ್ಮಾಮೀಟರ್‌ಗಳು ಅಗತ್ಯವಿದೆ. ಸ್ಯಾನಿಟೈಸರ್ ಕೂಡ ಬೇಕಾಗುತ್ತದೆ. ಬಹುತೇಕ ಅಂಗನವಾಡಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸ್ವತಃ ತಂದು ಅಂಗನವಾಡಿ ಕೇಂದ್ರಗಳನ್ನು ತೆರೆದಿದ್ದಾರೆ.

ಹದಿನೆಂಟು ಲಕ್ಷ ಮಕ್ಕಳು ಕಲಿಕ

ರಾಜ್ಯದಲ್ಲಿರುವ 66 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ 18 , 89, 833 ಮಕ್ಕಳು ದಾಖಲಾಗಿದ್ದರು. ಗರ್ಭಿಣಿ ಮಹಿಳೆಯರು ಮತ್ತು ಭಾಣಂತಿಯರು ಸೇರಿದಂತೆ 51 ಲಕ್ಷ ಮಂದಿ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳು. ಕೊರೊನಾ ಸೋಂಕು ಬಳಿಕ ಈ ಪ್ರಮಾಣದ ಮಕ್ಕಳು ಪೌಷ್ಠಿಕ ಆಹಾರ ಮತ್ತು ಕಲಿಕೆಯಿಂದ ದೂರ ಉಳಿದಿದ್ದರು. ಇದೀಗ ಅಂಗನವಾಡಿಗಳು ತೆರೆದಿರುವ ಕಾರಣ ಗ್ರಾಮೀಣ ಭಾಗದ ಪುಟಾಣಿಗಳ ಪೋಷಕರಲ್ಲಿ ಸಂತಸ ಮೂಡಿದೆ.

ಪೂರ್ವ ಪ್ರಾಥಮಿಕ ಶಾಲೆ ಬಿಟ್ಟು ಅಂಗನವಾಡಿ ಮೆಟ್ಟಿಲು

ಕೊರೊನಾ ಸೋಂಕಿನ ಆರ್ಥಿಕ ಸಂಕಷ್ಟದಿಂದ ಜರ್ಜರಿತವಾಗಿರುವ ಪೋಷಕರು ಶಾಲಾ ಶುಲ್ಕ ಕಟ್ಟಲಾಗದೇ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಸೇರಿಸುತ್ತಿದ್ದಾರೆ. ಈ ವರ್ಷ ಅರ್ಧ ಮುಗಿದಿದೆ. ಕಲಿತಷ್ಟು ಕಲಿಯಲಿ, ಮುಂದಿನ ವರ್ಷ ಶಾಲೆಗೆ ದಾಖಲಾತಿ ಮಾಡಿಸಿದರಾಯಿತು ಎಂಬ ಮನೋಭಾವನೆಯಿಂದ ಅಂಗನವಾಡಿ ಕೇಂದ್ರಗಳಿಗೆ ಹೆಚ್ಚು ಮಕ್ಕಳನ್ನು ದಾಖಲಾತಿ ಮಾಡಿಸಿದ್ದಾರೆ. ಹೀಗಾಗಿ ಪೂರ್ವ ಪ್ರಾಥಮಿಕ ಶಾಲೆಗಳು ಆರಂಭವಾದರೂ ಮಕ್ಕಳ ದಾಖಲಾತಿ ಇಲ್ಲದೇ ಪರದಾಡುತ್ತಿವೆ. ಆದರೆ ಅಂಗನವಾಡಿ ಕೇಂದ್ರಗಳಿಗೆ ಹೆಚ್ಚು ಮಕ್ಕಳು ದಾಖಲಾತಿಯಾಗಿದ್ದಾರೆ.

ಅಂಗನವಾಡಿ ತೆರೆಯಲು ಮಾರ್ಗಸೂಚಿ

ರಾಜ್ಯದಲ್ಲಿ ಅಂಗನವಾಡಿ ಕೇಂದ್ರ ತೆರೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಯರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಅಂಗನವಾಡಿ ಕೇಂದ್ರದ ಒಳಾಂಗಣ ಮತ್ತು ಹೊರಾಂಗಣ ಶುದ್ಧವಾಗಿಟ್ಟುಕೊಳ್ಳಬೇಕು. ಅಂಗನವಾಡಿ ಆಟಿಕೆ ಸಾಮಾನು, ಕಿಟಕಿ, ಬಾಗಿಲು, ಕೂರುವ ಬಟ್ಟೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಪೌಷ್ಠಿಕ ಆಹಾರ ತಯಾರಿಸುವ ಎಲ್ಲಾ ಪಾತ್ರೆಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಅಂಗನವಾಡಿ ತೆರೆಯುವ ಬಗ್ಗೆ ಬಾಲವಿಕಾಸ ಸಮಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ವಿಷಯ ತಿಳಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳ ಪೋಷಕರು ಕಡ್ಡಾಯವಾಗಿ ಒಪ್ಪಿಗೆ ಪತ್ರ ಪಡೆದಿರಬೇಕು. ಹೀಗೆ ನಾನಾ ಷರತ್ತುಗಳನ್ನು ವಿಧಿಸಿ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ.

ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯ

ರಾಜ್ಯದಲ್ಲಿ 20 ತಿಂಗಳ ಬಳಿಕ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿರುವುದು ಸಂತಸ ತಂದಿದೆ. ಆದರೆ ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಲ್ಪಿಸಬೇಕು. ಅಂಗನವಾಡಿಗಳು ಸುಗಮವಾಗಿ ನಡೆದುಕೊಂಡು ಹೋಗಲು ಇಲಾಖೆ ಅಗತ್ಯ ಅನುದಾನ ತ್ವರಿತವಾಗಿ ಬಿಡುಗಡೆ ಮಾಡಬೇಕು ಎಂದು ಅಂಗನವಾಡಿ ನೌಕರರ ಸಂಘದ ಹೋರಾಟಗಾರ್ತಿ ವರಲಕ್ಷ್ಮೀ ಅವರು ಒನ್‌ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.