ಆಸ್ಪತ್ರೆಯಾಗಿ ಪರಿವರ್ತಿತ ಕೆಂಪೇಗೌಡ ಸಮುದಾಯ ಭವನಕ್ಕೆ ಅಬಕಾರಿ ಸಚಿವರೊಂದಿಗೆ ಬಿಬಿಎಂಪಿ ಆಯುಕ್ತರ ಭೇಟಿ

ಆಸ್ಪತ್ರೆಯಾಗಿ ಪರಿವರ್ತಿತ ಕೆಂಪೇಗೌಡ ಸಮುದಾಯ ಭವನಕ್ಕೆ ಅಬಕಾರಿ ಸಚಿವರೊಂದಿಗೆ ಬಿಬಿಎಂಪಿ ಆಯುಕ್ತರ ಭೇಟಿ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ರೂಪಾಂತರಿ ಒಮಿಕ್ರಾನ್ ಸೇರಿದಂತೆ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನರ ಚಿಕಿತ್ಸೆಗಾಗಿ ಒಂದು ಕೋಟಿ ರೂ ವೆಚ್ಚದಲ್ಲಿ ಪರಿವರ್ತನೆಗೊಂಡಿರುವ ಸ್ಥಳೀಯ ಕೆಂಪೇಗೌಡ ಸಮುದಾಯ ಭವನಕ್ಕೆ ಸ್ಥಳೀಯ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಮತ್ತು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಗೋಪಾಲಯ್ಯ, ರಾಜ್ಯದಲ್ಲಿ ಕೋವಿಡ್ 3 ನೆ ಅಲೆ ನಿಯಂತ್ರಣ ಸಂಬಂಧ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿಂದು ತಜ್ಞರ ಸಲಹಾ ಸಮಿತಿ ಸಭೆ ನಡೆಯಲಿದ್ದು. ಅಲ್ಲಿ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ದರಿರುವುದಾಗಿ ತಿಳಿಸಿದರು.

ಸಿಎಸ್‌ಆರ್ ಅನುದಾನದಲ್ಲಿ 1 ಕೋಟಿ ರೂ ವೆಚ್ಚದಲ್ಲಿ ಸಮುದಾಯ ಭವನವನ್ನು 60 ಕ್ಕೂ ಅಧಿಕ ಹಾಸಿಗೆಯ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದ್ದು, ಇದರಲ್ಲಿ 18 ಐಸಿಯು ಬೆಡ್‌ಗಳಿವೆ. ಇನ್ನೂ ಬೇಕಾದ ಅಗತ್ಯ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಲು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಮತ್ತು ಪಶ್ಚಿಮ ವಲಯ ಜಂಟಿ ಆಯುಕ್ತ ಶಿವಸ್ವಾಮಿ ಅವರೊಂದಿಗೆ ಆಗಮಿಸಿದ್ದು, ಬೇಕಾದ ವೈದ್ಯಕೀಯ ಸಿಬ್ಬಂದಿ ಮತ್ತು ಇತರೆ ಅಗತ್ಯ ಸೇವೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು. ಬಿಬಿಎAಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ,ಜನರ ವರ್ತನೆ ಮೇಲೆ ಕೋವಿಡ್ ಹರಡುವಿಕೆ ಮತ್ತು ಅದರ ಪರಿಣಾಮಗಳು ಅವಲಂಭಿತವಾಗಿದೆ. ಈ ಹಿನ್ನೆಲೆಯಲ್ಲಿ ಜನರೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಬಿಬಿಎಂಪಿ ವ್ಯಾಪ್ತಿಯ ಹಜ್ ಭವನದಲ್ಲಿ ಅವಶ್ಯಕತೆಗೆ ತಕ್ಕಂತೆ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಮಂಜುಳ ಮತ್ತು ಸ್ಥಳಿಯ ಮುಖಂಡರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.