ಕೆಎಸ್ಸಾರ್ಟಿಸಿಗೆ ಒಂದೇ ದಿನದಲ್ಲಿ 22.56 ಕೋಟಿ ರೂ. ಗಳಿಕೆ: ಎಂ. ಚಂದ್ರಪ್ಪ

ಮಂಗಳೂರು, ಅ.11: ಕೆಎಸ್ಸಾರ್ಟಿಸಿ ಸೋಮವಾರ ಒಂದೇ ದಿನದಲ್ಲಿ 22.56 ಕೋಟಿ ರೂ. ಗರಿಷ್ಠ ಗಳಿಕೆಯಾಗಿದೆ. ಕಳೆದ ಎರಡು ವರ್ಷದ ಇತಿಹಾಸದಲ್ಲಿ ದಿನದಲ್ಲಿ ಗಳಿಸಿದ ಆದಾಯದಲ್ಲಿ ಇದು ದಾಖಲೆಯಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಅಧ್ಯಕ್ಷ ಎಂ.ಚಂದ್ರಪ್ಪ ಹೇಳಿದ್ದಾರೆ.
ಮಂಗಳೂರಿನ ಕೆಎಸ್ಸಾರ್ಟಿಸಿ ವಿಭಾಗಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆ ಅಧಿಕಾರಿ, ಸಿಬ್ಬಂದಿ ಜತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ದಸರಾ ರಜಾ ದಿನ ಕಳೆದರೂ ಪ್ರಯಾಣಿಕರ ದಟ್ಟಣೆಯಲ್ಲಿ ಕಡಿಮೆಯಾಗಿಲ್ಲ. ಬಾಕಿ ದಿನಗಳಲ್ಲಿ ಸರಾಸರಿ 12 ಕೋಟಿ ರೂ. ಆದಾಯ ಬರುತ್ತಿದೆ. ಮಂಗಳೂರು ವಿಭಾಗದಲ್ಲಿ ದಿನಂಪ್ರತಿ ಒಂದು ಕೋಟಿ ರೂ. ಆದಾಯ ಬರುತ್ತಿದೆ ಎಂದು ಚಂದ್ರಪ್ಪ ಹೇಳಿದರು.
ಈಗಾಗಲೇ ಮೈಸೂರಿನಲ್ಲಿರುವ ನಗರ ಹಾಗೂ ಗ್ರಾಮೀಣ ಸಾರಿಗೆ ವಿಭಾಗವನ್ನು ವಿಲೀನಗೊಳಿಸಿ ಒಂದೇ ವಿಭಾಗ ಮಾಡಲಾಗಿದೆ. ಅದೇ ರೀತಿ ಬಿಎಂಟಿಸಿ ಹೊರತುಪಡಿಸಿ ಕೆಎಸ್ಸಾರ್ಟಿಸಿ ನಾಲ್ಕು ವಿಭಾಗಗಳನ್ನು ವಿಲೀನಗೊಳಿಸಿ ಒಂದೇ ವಿಭಾಗ ರೂಪಿಸುವ ಬಗ್ಗೆ ಶ್ರೀನಿವಾಸಮೂರ್ತಿ ಸಮಿತಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದರ ಸಾಧಕ, ಬಾಧಕ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಿಗಮದಲ್ಲಿ ಅನಗತ್ಯ ದುಂದುವೆಚ್ಚಕ್ಕೆ ಕಾರಣವಾಗಿರುವ ವಿವಿಧ ವಿಭಾಗಗಳನ್ನು ವಿಲೀನಗೊಳಿಸಿ, ಅಧಿಕಾರಿ, ಸಿಬ್ಬಂದಿಯನ್ನು ಬೇರೆ ಕಡೆಗಳಿಗೆ ನಿಯೋಜನೆ ಮಾಡಲಾಗಿದೆ ಎಂದವರು ಹೇಳಿದರು.
ಸದ್ಯಕ್ಕೆ ವರ್ಗಾವಣೆ ಇಲ್ಲ
ಕಳೆದ ವರ್ಷ ಚಾಲಕ-ನಿರ್ವಾಹಕರು ವರ್ಗಾವಣೆಗೊಂಡಿದ್ದರೂ ಅವರನ್ನು ಬಿಡುಗಡೆಗೊಳಿಸಿರಲಿಲ್ಲ. ಅವರನ್ನು ಕಳುಹಿಸಿದರೆ, ಇಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲ. ಚಾಲಕ-ನಿರ್ವಾಹಕರ ಸೇವೆ ಕೆಎಸ್ಸಾರ್ಟಿಸಿ ಅತ್ಯಗತ್ಯವಾಗಿದ್ದು, ಪರ್ಯಾಯ ವ್ಯವಸ್ಥೆ ಬಳಿಕವೇ ಅವರ ವರ್ಗಾವಣೆಯನ್ನು ಅನುಷ್ಠಾನಗೊಳಿಸಲಾಗುವುದು. ಈಗ ಮಂಗಳೂರು, ಪುತ್ತೂರು, ರಾಮನಗರ ಹಾಗೂ ಚಾಮರಾಜನಗರ ಸೇರಿ ಒಟ್ಟು 350 ಮಂದಿ ಚಾಲಕ-ನಿರ್ವಾಹಕರನ್ನು ಹೊರಗುತ್ತಿಗೆ ಆಧಾರದಲ್ಲಿ ನಿಗಮಕ್ಕೆ ಸೇರ್ಪಡೆಗೊಳಿಲಾಗುತ್ತಿದೆ ಎಂದರು.
ಬಸ್ ನಿಲ್ದಾಣಕ್ಕೆ ಕ್ರಮ ಆಗದಿದ್ದಲ್ಲಿ ಸ್ಮಾರ್ಟ್ ಸಿಟಿ ಪಿಡಿ ವಿರುದ್ಧ ದೂರು
ಸ್ಮಾರ್ಟ್‌ಸಿಟಿ ಯೋಜನೆಯಡಿ ತುಮಕೂರು ಮತ್ತು ದಾವಣಗೆರೆಗಳಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಮಂಗಳೂರಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಬಸ್ ನಿಲ್ದಾಣಕ್ಕೆ ಅವಕಾಶ ಇಲ್ಲ. ಬಿಜೈ ನಿಲ್ದಾಣ ಎಂಟು ಎಕರೆ ವ್ಯಾಪಿಸಿದ್ದು, ಇಲ್ಲಿ ಆಧುನಿಕ ಬಸ್ ನಿಲ್ದಾಣ ನಿರ್ಮಾಣಕ್ಕೆ 100 ಕೋಟಿ ರೂ. ಮೊತ್ತವನ್ನು ಸ್ಮಾರ್ಟ್‌ಸಿಟಿಯಡಿ ಮಂಜೂರುಗೊಳಿಸಬೇಕು ಎಂದು ಕೆಎಸ್ಸಾರ್ಟಿಸಿ ಅಧ್ಯಕ್ಷ ಚಂದ್ರಪ್ಪ ಆಗ್ರಹಿಸಿದರು.
ತಪ್ಪಿದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸೇರ್ಪಡೆಗೊಳಿಸದೇ ಇರುವ ಕುರಿತಂತೆ ಸ್ಮಾರ್ಟ್‌ಸಿಟಿ ಯೋಜನಾ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಚಂದ್ರಪ್ಪ ಹೇಳಿದರು.
ವೇತನ ಹೆಚ್ಚಳಕ್ಕೆ ಕ್ರಮ
ನಾಲ್ಕು ವಿಭಾಗಗಳ ಸಾರಿಗೆ ಸಿಬ್ಬಂದಿಗೆ ಆರನೇ ವೇತನ ಆಯೋಗದ ಪ್ರಕಾರ ವೇತನ ಏರಿಕೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದಾರೆ. ಪ್ರಸಕ್ತ ಸಾರಿಗೆ ನೌಕರರಿಗೆ ಪ್ರತಿ ತಿಂಗಳ ಒಂದನೇ ತಾರೀಕಿಗೆ ವೇತನ ಪಾವತಿಯಾಗುತ್ತಿದೆ. ವೇತನ ಏರಿಕೆ ವಿಚಾರವನ್ನು ಸರ್ಕಾರ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ವೇತನ ಹೆಚ್ಚಳಕ್ಕೆ ಸರ್ಕಾರ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ ಎಂದರು.
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ಅಧಿಕಾರಿ ರಾಜೇಶ್ ಶೆಟ್ಟಿ, ಪುತ್ತೂರು ವಿಭಾಗೀಯ ಅಧಿಕಾರಿ ಜಯಕರ ಶೆಟ್ಟಿ ಇದ್ದರು.
"ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಇ-ಟಿಕೆಟ್ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು. ಈಗಾಗಲೇ ಕೆಲವು ಖಾಸಗಿ ಬಸ್‌ಗಳಲ್ಲಿ ಇ-ಟಿಕೆಟ್ ಸೌಲಭ್ಯ ಇರುವುದು ಗಮನಕ್ಕೆ ಬಂದಿದೆ. ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಇಟಿಎಂ ಮಿಷನ್ ಮೂಲಕ ಇ-ಟಿಕೆಟ್ ಯೋಜನೆ ಕಾರ್ಯಗತಗೊಳಿಸಲು ಯೋಚನೆ ಮಾಡಲಾಗುವುದು. ನಿಗಮದಲ್ಲಿ 30 ಸಾವಿರ ಬಸ್‌ಗಳಿದ್ದು, 1.30 ಲಕ್ಷ ನೌಕರರಿದ್ದಾರೆ. ಕೆಎಸ್ಸಾರ್ಟಿಸಿ ಅಪಘಾತ ರೇಟ್ ಬರೇ ಶೇ.0.02 ಆಗಿದೆ. ಇಂಧನ ಬೆಲೆ ಏರಿಕೆಯಾದರೂ ಪ್ರಯಾಣಿಕರ ಟಿಕೆಟ್ ದರ ಏರಿಕೆ ಮಾಡಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಯಾಣ ದರ ಏರಿಕೆ ಮಾಡದೇ ಇರಲು ನಿರ್ಧರಿಸಲಾಗಿದೆ".
- ಎಂ.ಚಂದ್ರಪ್ಪ, ಅಧ್ಯಕ್ಷರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ).
ಅ. 15ರಿಂದ ಇ ಬಸ್ ಪ್ರಾಯೋಗಿಕ ಸಂಚಾರ
ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸರಕಾರ ಉದ್ದೇಶಿಸಿದೆ. ಒಟ್ಟು 350 ಎಲೆಕ್ಟ್ರಿಕ್ ಬಸ್(ಇ-ಬಸ್) ಖರೀದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಅ.15ರ ವೇಳೆಗೆ ಮೊದಲ ಇ-ಬಸ್ ಪ್ರಾಯೋಗಿಕವಾಗಿ ಸಂಚಾರ ನಡೆಸಲಿದೆ. ಪ್ರಸ್ತುತ ಖರೀದಿಸುವ ಇ-ಬಸ್‌ಗಳು ಅತ್ಯಾಧುನಿಕ ಮಾದರಿಯದ್ದಾಗಿದ್ದು, ಮೊದಲ ಹಂತದಲ್ಲಿ 50 ಇ-ಬಸ್ ಆಗಮಿಸಲಿದೆ. ಭವಿಷ್ಯದಲ್ಲಿ ಡೀಸೆಲ್, ಪೆಟ್ರೋಲ್ ಬದಲು ಇ-ಬಸ್‌ಗಳ ಓಡಾಟ ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆ. 450 ಕಿ.ಮೀ. ವ್ಯಾಪ್ತಿ ಸಂಚಾರದ ಇ-ಬಸ್‌ಗಳನ್ನು ದೂರದ ರೂಟ್‌ಗಳ ಸಂಚಾರಕ್ಕೆ ಬಳಸಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಹೇಳಿದರು.