ಇಬ್ಬರು ಅಧಿಕಾರಿಗಳ ಬಂಧನ ವಿರುದ್ಧ ಮಧ್ಯಂತರ ತಡೆಯಾಜ್ಞೆ
ಕೊಚ್ಚಿ: ಇಸ್ರೊ ಬೇಹುಗಾರಿಕೆ ಸಂಬಂಧ ವಿಜ್ಞಾನಿ ನಂಬಿ ನಾರಾಯಣನ್ ಬಂಧನ ಪ್ರಕರಣದಲ್ಲಿ ಸಿಬಿಐ ದಾಖಲಿಸಿದ್ದ ಕ್ರಿಮಿನಲ್ ಸಂಚು, ಅಪಹರಣ, ಸಾಕ್ಷ್ಯ ತಿರುಚುವಿಕೆ ಕುರಿತ ದೂರಿಗೆ ಸಂಬಂಧಿಸಿ ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳನ್ನು ಬಂಧಿಸುವುದರ ವಿರುದ್ಧ ಕೇರಳ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ನಿರೀಕ್ಷಣಾ ಜಾಮೀನು ಕೋರಿ ಎಸ್.ವಿಜಯನ್ ಮತ್ತು ತಂಪಿ ಎಸ್.ದುರ್ಗ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ನ್ಯಾಯಮೂರ್ತಿ ಅಶೋಕ್ ಮೋಹನ್ ಈ ಆದೇಶ ಹೊರಡಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.
ಸಿಬಿಐ ಪರ ವಕೀಲ ಸುವಿನ್ ಆರ್.ಮೆನನ್ ಅವರು, ಈ ಅಧಿಕಾರಿಗಳನ್ನು ಬಂಧಿಸಿದರೂ ₹ 50 ಸಾವಿರ ಮೌಲ್ಯದ ಬಾಂಡ್, ಇಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಆಧರಿಸಿ ಬಿಡುಗಡೆಗೆ ಸೂಚಿಸಿದೆ ಎಂದು ಹೇಳಿದರು.
ಬಂಧನದ ವಿರುದ್ಧದ ತಡೆಯಾಜ್ಞೆ ಆದೇಶದ ಅವಧಿಯು ಪ್ರಕರಣದ ಮುಂದಿನ ವಿಚಾರಣೆಯು ನಡೆಯಲಿರುವ ಆಗಸ್ಟ್ 2ರವರೆಗೂ ಚಾಲ್ತಿಯಲ್ಲಿರುತ್ತದೆ.