ಅಲ್ಲು ಅರ್ಜುನ್‌ಗೆ ಚಿತ್ರ ಮಾಡಲು ಹೋದಾಗ ಕನ್ನಡದವನು ಎಂದು ಮಾಡಿದ ಅವಮಾನ ಬಿಚ್ಚಿಟ್ಟ ಆರ್ ಚಂದ್ರು!

ಆರ್ ಚಂದ್ರು.. ಕನ್ನಡ ಚಿತ್ರರಂಗದ ಸಕ್ರಿಯ ಯಶಸ್ವಿ ನಿರ್ದೇಶಕರಲ್ಲಿ ಓರ್ವರು. 2008ರಲ್ಲಿ ತಾಜ್‌ಮಹಲ್ ಎಂಬ ಸಿನಿಮಾ ಮಾಡಿ ನಿರ್ದೇಶಕನಾಗಿ ತನ್ನ ಕೆಲಸವನ್ನು ಆರಂಭಿಸಿ ಚೊಚ್ಚಲ ಪ್ರಯತ್ನದಲ್ಲಿಯೇ ದೊಡ್ಡ ಗೆಲುವು ಸಾಧಿಸಿದ ಚಂದ್ರು ಬಳಿಕ ಬಳಿಕ ಚಾರ್‌ಮಿನಾರ್, ಮೈಲಾರಿ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದರು.
2019ರಲ್ಲಿ ಏಕ್ ಲವ್ ಯಾ ಎಂಬ ಕಲರ್‌ಫುಲ್ ಕಮರ್ಷಿಯಲ್ ಸಿನಿಮಾ ಮಾಡಿದ್ದ ಆರ್ ಚಂದ್ರು ಕೆಜಿಎಫ್ ಸಿನಿಮಾ ವೀಕ್ಷಿಸಿ ತಾನೂ ಸಹ ಇಂತಹ ದೊಡ್ಡ ರಿಚ್ ಮೇಕಿಂಗ್ ಇರುವ ಸಿನಿಮಾವನ್ನು ನಿರ್ದೇಶಿಸಬೇಕು ಎಂಬ ಛಲದಿಂದ ಈಗ ರಿಯಲ್ ಸ್ಟಾರ್ ಉಪೇಂದ್ರಗೆ ಕಬ್ಜ ಎಂಬ ಚಿತ್ರವನ್ನು ನಿರ್ದೇಶಿಸಿ ಗೆದ್ದಿದ್ದಾರೆ.
ಅಂಡರ್‌ವರ್ಲ್ಡ್ ಕಥೆಯನ್ನು ರಿಚ್ ಆಗಿ ತೆರೆ ಮೇಲೆ ತೋರಿಸಿರುವ ಆರ್ ಚಂದ್ರು ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ಅವರನ್ನೂ ಸಹ ಈ ಚಿತ್ರಕ್ಕೆ ಕರೆತಂದು ಕನ್ನಡ ಚಿತ್ರರಂಗದ ಮೂವರು ಬಿಗ್ಗೆಸ್ಟ್ ನಟರನ್ನು ಒಂದೇ ಚಿತ್ರಕ್ಕೆ ತಂದ ಸಾಧನೆ ಮಾಡಿದ್ದಾರೆ.
ಹೀಗೆ ಇಂಡಸ್ಟ್ರಿಯ ದೊಡ್ಡ ನಟರನ್ನು ಒಂದೇ ಚಿತ್ರಕ್ಕೆ ಕರೆ ತಂದಿರುವ ಆರ್ ಚಂದ್ರು ಕಬ್ಜ ಸಿನಿಮಾ ಮೂಲಕ ಕೇವಲ ಎರಡೇ ದಿನದಲ್ಲಿ ನೂರು ಕೋಟಿ ಕ್ಲಬ್ ಸೇರುವಲ್ಲಿಯೂ ಸಹ ಯಶಸ್ವಿಯಾಗಿದ್ದಾರೆ. ಹೀಗೆ ಇಂಡಸ್ಟ್ರಿಯ ದೊಡ್ಡ ದೊಡ್ಡ ನಟರ ಕಾಲ್‌ಶೀಟ್ ಪಡೆದು ಸುಲಭವಾಗಿ ಸಿನಿಮಾ ಮಾಡುತ್ತಿರುವ ಆರ್ ಚಂದ್ರು ತಾವು ತೆಲುಗು ಚಿತ್ರರಂಗದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್‌ಗೆ ಸಿನಿಮಾ ಮಾಡಲೆಂದು ಮುಂದಾದಾಗ ತಮಗಾದ ಅವಮಾನವನ್ನು ಬಿಚ್ಚಿಟ್ಟಿದ್ದಾರೆ.
ಹೌದು, ಇಂದು ( ಮಾರ್ಚ್ 19 ) ನಡೆದ ಕಬ್ಜ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ ಚಂದ್ರು "ನನ್ನ ಚಿತ್ರವನ್ನು ಮೊದಲು ಓಟಿಟಿಯಿಂದ ಸ್ಯಾಟಲೈಟ್‌ವರೆಗೆ ಓಪನ್ ಆಗಿ ತೋರಿಸಿ ಇದು ಸರ್ ನನ್ನ ಸಿನಿಮಾ ಎಂದು ತೋರಿಸಿ ಹಾಕಿದ್ದ ಬಜೆಟ್ ಅನ್ನು ಅವತ್ತೇ ಸಂಪಾದಿಸಿದ್ದೆ. ಇದು ಕನ್ನಡಿಗರು ಹಾಗೂ ಭಾರತದ ಜನ ನನಗೆ ಕೊಟ್ಟಿರುವ ಪ್ರತಿಫಲ. ಇದನ್ನೆಲ್ಲಾ ಯಾಕೆ ಹೇಳ್ತಾ ಇದೀನಿ ಎಂದರೆ ಒಂದು ದೊಡ್ಡ ಪ್ರಯತ್ನ ಮಾಡುವಾಗ ನೂರಾರು ವಿಘ್ನ ಆಗುತ್ತೆ ಅಂತಾರೆ. ನಾನು ಹೊರಟು ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ ಎಂಬ ತೆಲುಗು ಚಿತ್ರ ಮಾಡಿದ್ದೆ. ನಾನು ಅಲ್ಲಿ ದೊಡ್ಡದಾಗಿ ಗೆದ್ದುಬಿಡಬೇಕು ಅಂತ ಅಲ್ಲಿಗೆ ಹೋದೆ, ನನಗೆ ಕೊಟ್ಟಿದ್ದೇ ಮೂರು ಕೋಟಿಯ ಸಣ್ಣ ಬಜೆಟ್. ಯಾಕೆ ಎಂದರೆ ನಾನು ಕನ್ನಡ ಡೈರೆಕ್ಟರ್ ಅಂತ" ಎಂದು ಹೇಳಿಕೊಂಡರು.
ಮಾತು ಮುಂದುವರಿಸಿದ ಚಂದ್ರು "ಸರ್ ನಾನು ಅಲ್ಲು ಅರ್ಜುನ್ ಅವರಿಗೆ ಸಿನಿಮಾ ಮಾಡಬೇಕು ಸರ್ ಕಥೆ ಹೇಳ್ತಿನಿ ಸರ್ ಎಂದು ನಿರ್ಮಾಪಕರಿಗೆ ಹೇಳಿದಾಗ ಯಾರಮ್ಮ ಕನ್ನಡ ಡೈರೆಕ್ಟ್ರಾ ಬೇಡಮ್ಮ ಎಂದುಬಿಟ್ರು. ಅವತ್ತು ನಾನು ನಿರ್ಧರಿಸಿದೆ ಮೇಕಿಂಗ್ ಚೆನ್ನಾಗಿ ಮಾಡಬೇಕು ಅಂತ. ಕನ್ನಡ ಡೈರೆಕ್ಟರ್ ಅಂತ ಕಥೆ ಕೇಳೋಕೆ ಒಪ್ಪಲಿಲ್ಲ, ತುಂಬಾ ನೋವಿತ್ತು ಸರ್, ಆ ನೋವನ್ನು ಹೋಗಲಾಡಿಸಿದ್ದು ನನ್ನದೇ ಕನ್ನಡ ಚಿತ್ರರಂಗದ ದೊಡ್ಡ ತಂಡ, ಕೆಜಿಎಫ್ ಟೀಮ್. ಅದಕ್ಕೆ ನನಗೆ ಕೆಜಿಎಫ್ ಟೀಮ್ ಎಂದರೆ ಇಷ್ಟ, ಅಂತಹ ಒಂದು ಮಾತನ್ನು ಹೋಗಲಾಡಿಸಿದ್ದು ಕೆಜಿಎಫ್ ಟೀಮ್, ಪ್ರಶಾಂತ್ ನೀಲ್, ಯಶ್ ಅವ್ರು, ವಿಜಯ್ ಕಿರಗಂದೂರು ಅವ್ರು. ಕೆಲವರು ಯಾಕೆ ಅವರ ಹೆಸರನ್ನು ಪದೇ ಪದೇ ಹೇಳ್ತೀಯಾ ಅಂತಾರೆ. ಆದರೆ ಅವರು ಸಾಧನೆ ಮಾಡಿದ್ದಾರೆ, ಅದಕ್ಕೆ ನಾನು ಅವರನ್ನು ಹೊಗಳುತ್ತೇನೆ. ನಾನೂ ಆ ಥರದ ಒಂದು ಪ್ರಯತ್ನ ಮಾಡಬೇಕು ಅಂತ ಹೊರಟೆ. ಆ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತದ್ದು ನನ್ನ ದೇವರಾದಂತಹ ಉಪ್ಪಿ ಸರ್. ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎಂದಾಗ ಮೂರು ವರ್ಷ ನನ್ನ ಬೆನ್ನೆಲುಬಾಗಿ ನಿಂತು ನನಗೆ ಡೇಟ್ ಕೊಟ್ಟರು" ಎಂದು ಹೇಳಿಕೆ ನೀಡಿ ಕಷ್ಟ ಬಂದಾಗ ಸಹಾಯಕ್ಕೆ ನಿಂತವರನ್ನು ನೆನೆದರು.