ಗಬ್ಬಾದಲ್ಲಿ ಐತಿಹಾಸಿಕ ಟೆಸ್ಟ್ ಗೆಲುವಿಗೆ 1 ವರ್ಷ: 36 ರನ್‌ಗಳಿಗೆ ಆಲೌಟ್ ಆದ ನಂತರ ಸರಣಿ ಗೆದ್ದಿದ್ದೆ ರೋಚಕ

ಗಬ್ಬಾದಲ್ಲಿ ಐತಿಹಾಸಿಕ ಟೆಸ್ಟ್ ಗೆಲುವಿಗೆ 1 ವರ್ಷ: 36 ರನ್‌ಗಳಿಗೆ ಆಲೌಟ್ ಆದ ನಂತರ ಸರಣಿ ಗೆದ್ದಿದ್ದೆ ರೋಚಕ

ರಿಯಾಗಿ ಒಂದು ವರ್ಷದ ಹಿಂದೆ ಭಾರತ ಗಬ್ಬಾ ಅಂಗಳದಲ್ಲಿ ಇತಿಹಾಸ ಸೃಷ್ಟಿಸಿತ್ತು. 32 ವರ್ಷಗಳಿಂದ ಬ್ರಿಸ್ಬೇನ್‌ನ ಗಬ್ಬಾ ಅಂಗಳದಲ್ಲಿ ಸೋಲನ್ನೇ ಕಾಣದೆ ಮೆರೆಯುತ್ತಿದ್ದ ಬಲಿಷ್ಠ ಕಾಂಗರೂ ಪಡೆಗಳ ಸೊಕ್ಕನ್ನು ಭಾರತದ ಯುವಪಡೆ ಮುರಿದು ಹಾಕಿತ್ತು.

ಇತ್ತೀಚಿನ ವರ್ಷಗಳಲ್ಲಿ ನೋಡಿದ ಅತ್ಯುತ್ತಮ ಟೆಸ್ಟ್ ಸರಣಿ ಎನ್ನುವ ಹೆಗ್ಗಳಿಕೆ ಕೂಡ ಈ ಸರಣಿಗೆ ಇದೆ.

ಈ ಸರಣಿ ಗೆಲ್ಲುವುದೇನು ಭಾರತಕ್ಕೆ ಸುಲಭವಾಗಿರಲಿಲ್ಲ. ಅಡಿಲೇಡ್ ಓವಲ್‌ನಲ್ಲಿ ನಡೆದ 4 ಪಂದ್ಯಗಳ ಸರಣಿಯ ಮೊದಲನೇ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರಿ ಮುಖಭಂಗ ಅನುಭವಿಸಿತ್ತು.

ಕಾಂಗರೂ ಪಡೆ ಮೊದಲನೇ ಟೆಸ್ಟ್ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಮೊದಲನೇ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಸರಣಿಯಿಂದ ಹೊರಗುಳಿದರೆ, ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಅಜಿಂಕ್ಯ ರಹಾನೆ ನಾಯಕತ್ವ ವಹಿಸಿಕೊಂಡರು. ನಂತರ ನಡೆದದ್ದು ಈಗ ಇತಿಹಾಸ.

ಮೊದಲನೇ ಪಂದ್ಯ ಸಂಭ್ರಮದಲ್ಲಿ ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ರಹಾನೆ ನೇತೃತ್ವದ ಯುವ ಪಡೆ ಮೊದಲ ಆಘಾತ ನೀಡಿತ್ತು.


ಫೀನಿಕ್ಸ್‌ನಂತೆ ಎದ್ದು ಬಂದ ಟೀಂ ಇಂಡಿಯಾ

ಎಂಸಿಜಿ ಅಂಗಳದಲ್ಲಿ ನಡೆದ ಪಂದ್ಯಲ್ಲಿ ಭಾರತದ ವೇಗದ ಬೌಲಿಂಗ್ ದಾಳಿಗೆ ಸಿಕ್ಕ ಕಾಂಗರೂಗಳು ತತ್ತರಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 195 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಾ ಆಘಾತ ಅನುಭವಿಸಿತು. ಬುಮ್ರಾ 4 ವಿಕೆಟ್ ಪಡೆದರೆ, ಅಶ್ವಿನ್ 3 ವಿಕೆಟ್ ಪಡೆದರು, ಮೊಹಮ್ಮದ್ ಸಿರಾಜ್ 2 ವಿಕೆಟ್, ಜಡೇಜಾ ಒಂದು ವಿಕೆಟ್ ಪಡೆದು ಮಿಂಚಿದರು.

ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ರಹಾನೆ ಅದ್ಭುತ ಶತಕ, ಜಡೇಜಾರ ಅರ್ಧಶತಕದ ನೆರವಿನಿಂದ 326 ರನ್‌ ಗಳಿಸಿ ಆಲೌಟ್ ಆಯಿತು. 131 ರನ್‌ಗಳ ಮುನ್ನಡೆ ಕಾಯ್ದುಕೊಂಡಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಕಾಂಗರೂಗಳ ಆಟ ನಡೆಯಲಿಲ್ಲ. ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ 200 ರನ್‌ಗಳಿಗೆ ಆಲೌಟ್ ಆಗಿ 69 ರನ್‌ಗಳ ಅತ್ಯಲ್ಪ ಮುನ್ನಡೆ ಪಡೆಯಿತು. ಸಿರಾಜ್ 3 ವಿಕೆಟ್ ಪಡೆದರೆ, ಬುಮ್ರಾ, ಅಶ್ವಿನ್ , ಜಡೇಜಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 8 ವಿಕೆಟ್ ಭರ್ಜರಿ ಜಯ ಸಾಧಿಸಿ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿತು.