ಮುರುಘಾ ಶ್ರೀಗಳ ಪ್ರಕರಣದಲ್ಲಿ ಹಸ್ತಕ್ಷೇಪವಿಲ್ಲ : ಆರಗ ಜ್ಞಾನೇಂದ್ರ

ಮುರುಘಾ ಶ್ರೀಗಳ ಪ್ರಕರಣದಲ್ಲಿ ಹಸ್ತಕ್ಷೇಪವಿಲ್ಲ : ಆರಗ ಜ್ಞಾನೇಂದ್ರ

ಬೆಂಗಳೂರು, ಅ.14- ಮುರುಘಾ ಶ್ರೀಗಳ ಪ್ರಕರಣದಲ್ಲಿ ಯಾರ ಪ್ರಭಾವವೂ ಇಲ್ಲ, ಹಸ್ತಕ್ಷೇಪವೂ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಈವರೆಗೂ ಅವರು ಹೊರಗೆ ಬರಲು ಆಗಿಲ್ಲ. ಕಾನೂನು ಎಲ್ಲರಿಗೂ ಒಂದೇ. ಯಾರ ರಕ್ಷಣೆಯೂ ಮಾಡುವುದಿಲ್ಲ ಎಂದು ಅವರು ಪ್ರಕಣೆಯಲ್ಲಿ ತಿಳಿಸಿದ್ದಾರೆ.

ಮರುಘಾ ಶ್ರೀಗಳ ವಿರುದ್ಧ ಮತ್ತೆ ಇಬ್ಬರು ಬಾಲಕಿಯರ ದೂರು ನೀಡಿದ್ದು, ಪೊಲೀಸರು ದೂರು ದಾಖಲು ಮಾಡಿಕೊಂಡು ತನಿಖೆ ಶುರು ಮಾಡಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ತಪ್ಪು ಆಗಿದ್ದರೆ ಕಾನೂನು ಕ್ರಮ ಆಗುತ್ತದೆ ಎಂದಿದ್ದಾರೆ.

ಎಷ್ಟೇ ಪ್ರಭಾವಿಯಾಗಿದ್ದರೂ ಕೂಡ ಕಾನೂನು ಪ್ರಕಾರವೇ ಕ್ರಮ ಆಗುತ್ತದೆ, ತನಿಖೆಯಾಗುತ್ತಿದೆ. ಪೊಲೀಸರು ಕಾನೂನಿನನ್ವಯವೇ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್‍ನಿಂದ ಹಿಜಾಬ್ ತೀರ್ಪು ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, ಈಗಾಗಲೇ ಶಿಕ್ಷಣ ಸಚಿವರು ರಾಜ್ಯ ಸರ್ಕಾರದ ಆದೇಶ ಮುಂದುವರೆಯುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇದಕ್ಕೆ ತಕ್ಕಂತೆ ನಾವು ಕ್ರಮ ಕೈಗೊಳ್ಳುತ್ತೇವೆ. ಹಿಜಾಬ್ ವಿಚಾರ ಶಿಕ್ಷಣ ಇಲಾಖೆ ತೆಗೆದುಕೊಳ್ಳುವ ತೀರ್ಮಾನದಂತೆ ಗೃಹ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ. ಗೃಹ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುತ್ತದೆ. ಹಿಜಾಬ್ ವಿಚಾರದಲ್ಲಿ ಮುಖ್ಯಮಂತ್ರಿ, ಸರ್ಕಾರ ತೆಗೆದುಕೊಳ್ಳುವ ನಿರ್ಧಾರದಂತೆ ಗೃಹ ಇಲಾಖೆ ಕೆಲಸ ಮಾಡಲಿದೆ ಎಂದಿದ್ದಾರೆ.

ನಿನ್ನೆ ಹಿಜಾಬ್ ವಿಚಾರದಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಭಿನ್ನ ತೀರ್ಪುಗಳು ಬಂದಿವೆ. ಈಗ ಕೇಸ್ ಸುಪ್ರೀಂಕೋರ್ಟಿನ ಮುಖ್ಯನ್ಯಾಯಮೂರ್ತಿಗಳ ಮುಂದೆ ಇದೆ. ಅವರು ವಿಚಾರಣೆ ಮಾಡಿ ಮುಂದಿನ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ದಾರೆ.