ದೇವಾಲಯಕ್ಕೆ ಭೇಟಿ ನೀಡುವುದು ನನ್ನ ಉದ್ಧೇಶವಾಗಿರಲಿಲ್ಲ; ಸ್ಥಳೀಯರ ಸೂಚನೆಯಂತೆ ಮುಂದುವರೆದೆ!

ದೇವಾಲಯಕ್ಕೆ ಭೇಟಿ ನೀಡುವುದು ನನ್ನ ಉದ್ಧೇಶವಾಗಿರಲಿಲ್ಲ; ಸ್ಥಳೀಯರ ಸೂಚನೆಯಂತೆ ಮುಂದುವರೆದೆ!

ಬೆಂಗಳೂರು: ನಾನ್ ಮಾಂಸದ ಊಟ ಸೇವಿಸಿರುವುದು ನಿಜ. ಆದರೆ ದೇವಸ್ಥಾನದ ಒಳಗೆ ಹೋಗಿಲ್ಲ. ದೇವಾಲಯದ ರಸ್ತೆಯಲ್ಲಿ ನಿಂತು ನಮಸ್ಕರಿಸಿದ್ದೇನೆ. ಸುಳ್ಳು ಹೇಳಬೇಕಾದ ಅಗತ್ಯತೆ ನನಗೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದಾರೆ.

ವ್ರತ ಪಾಲನೆಯ ದೇವಾಲಯಗಳು ಹಾಗೂ ಮಾಂಸಾಹಾರ ನೈವೇದ್ಯ ನೀಡುವ ದೇವಾಲಯಗಳು ಬೇಕಾದಷ್ಟಿವೆ. ಇದು ಕಾಂಗ್ರೆಸ್​ಗೆ ಅರ್ಥ ಆಗದಿರುವುದು ದುರ್ಧೈವ. ಸುಳ್ಳು ಹೇಳುವುದು ನನ್ನ ಜಾಯಮಾನವಲ್ಲ. ಅದೇನಿದ್ದರೂ ಕಾಂಗ್ರೆಸ್ ಪಕ್ಷದ ಕೆಲಸ ಎಂದು ಹೇಳಿದ್ದಾರೆ.

ದೇವಾಲಯಕ್ಕೆ ಭೇಟಿ ನೀಡುವುದು ನನ್ನ ಉದ್ಧೇಶವಾಗಿರಲಿಲ್ಲ. ನಾನು ದೇವರ ದರ್ಶನಕ್ಕಾಗಿ ಹೋಗಿರಲಿಲ್ಲ. ಅಲ್ಲಿನ ಸ್ಥಳೀಯ ಜನರ ಸೂಚನೆಯಂತೆ ಮುಂದುವರೆದೆ. ಪ್ರತಿಯೊಂದನ್ನೂ ಎದೆ ಬಗೆದು ತೋರಿಸಲು ನಾನು ಹನುಮಂತ ಅಲ್ಲ ಎಂದು ಸಿ.ಟಿ.ರವಿ ಹೇಳಿದರು.

ಫೆ.19ರಂದು ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಸಿ.ಟಿ.ರವಿ ಬಾಡೂಟ ಸೇವಿಸಿದ್ದರು. ಬಳಿಕ ಶಾಸಕ ಸುನಿಲ್ ನಾಯ್ಕ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಹಳೇ ಬಸ್ ನಿಲ್ದಾಣ ಸಮೀಪವಿರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸಿ.ಟಿ.ರವಿ ಬಾಡೂಟ ಸೇವಿಸುತ್ತಿರುವ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಮಾಂಸ ಸೇವಿಸಿ ಸಿ,ಟಿ.ರವಿ ದೇವಸ್ಥಾನಕ್ಕೆ ತೆರಳಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು.

ಈ ವಿಚಾರವಾಗಿ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಸಿ.ಟಿ. ರವಿ ನಿನ್ನೆ ಮಂಡ್ಯದಲ್ಲಿ ಮಾತನಾಡುತ್ತಾ, ಭಟ್ಕಳಕ್ಕೆ ಹೋಗಿದ್ದಾ ನಾಗಬನ ನೋಡಲು ಕರೆದಿದ್ದರು. ಹೊಸದಾಗಿ ದೇವಾಲಯ ಕಟ್ಟಲಾಗಿದ್ದರಿಂದ 45 ದಿನಗಳ ಕಾಲ ತೆರೆದಿರಲಿಲ್ಲ. ನಾಗಬನದ ಹೊರಾವರಣದಲ್ಲಿ ನಿಂತು ದರ್ಶನ ಪಡೆದಿದ್ದೇವೆ. ನನಗೆ ದೇವರ ಬಗ್ಗೆ ಶ್ರದ್ಧೆ ಇದೆ. ದೇವಾಲಯಕ್ಕೆ ಮಾಂಸ ತಿಂದು ತಿಂದು ಹೋಗಿಲ್ಲ ಎಂದು ಹೇಳಿದ್ದಾರೆ.

ಸುಮ್ಮನೆ ವಿವಾದ ಹುಟ್ಟಹಾಕಲು ಕೆಲವರು ಹೀಗೆ ಅಪಪ್ರಚಾರ ಮಾಡುತ್ತಿದ್ದಾರೆ. ವ್ರತ, ಪೂಜೆಗಳನ್ನು ಆಚರಿಸುತ್ತಾ ಬಂದಿರುವ ನನಗೆ ದೇವರ ಬಗ್ಗೆ ಶ್ರದ್ಧೆ ಇದೆ. ಮಾಂಸ ತಿನ್ನುತ್ತೇನೆ. ಹಾಗಂತ ತಿಂದು ದಾಸ್ಟ್ಯ ತೋರಿಸುವುದಿಲ್ಲ. ಮಾಂಸ ತಿಂದು ದೇವಾಲಯಕ್ಕೆ ಹೋಗ್ತೀನಿ ಏನಿವಾಗ? ಯಾರು ಏನ್ ಮಾಡ್ತಾರೆ ಅಂತ ಸಿದ್ದರಾಮಯ್ಯ ರೀತಿ ಹೇಳಲ್ಲ ಎಂದು ಹೇಳಿದರು.