ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 9000 ರನ್ ಗಳಿಸಿದ ಮೂವರು ಬ್ಯಾಟ್ಸ್‌ಮನ್‌ಗಳು
ಸದ್ಯ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ರಿಕೆಟ್ ಸ್ವರೂಪವೆಂದರೆ ಅದು ಟಿ20 ಕ್ರಿಕೆಟ್. ಪ್ರಮುಖ ಕ್ರಿಕೆಟ್ ರಾಷ್ಟ್ರಗಳಲ್ಲಿ ವಿವಿಧ ಫ್ರಾಂಚೈಸಿ ಆಧಾರಿತ ಲೀಗ್‌ಗಳೊಂದಿಗೆ ಟಿ20 ಸ್ವರೂಪವು ಅಭಿಮಾನಿಗಳು ಕ್ರೀಡೆಯನ್ನು ಆನಂದಿಸುವುದು ಸುಲಭವಾಗಿದೆ ಮತ್ತು ಹೆಚ್ಚಾಗಿದೆ.
ಇಂತಹ ಚುಟುಕು ಸ್ವರೂಪದ ಆಟದಲ್ಲಿ ಸತತವಾಗಿ ರನ್ ಗಳಿಸುವುದು ಸುಲಭದ ಮಾತಲ್ಲ. ಆದರೆ, ಕೆಲವು ಬ್ಯಾಟರ್‌ಗಳು ಅದ್ಭುತ ಮಟ್ಟದ ಸ್ಥಿರತೆಯನ್ನು ಕಾಯ್ದುಕೊಂಡಿದ್ದಾರೆ ಮತ್ತು ರನ್‌ಗಳ ಶಿಖರವನ್ನೇ ಸ್ಥಾಪಿಸಿದ್ದಾರೆ.
ಇನ್ನಿಂಗ್ಸ್‌ಗಳ ಸಂಖ್ಯೆಯನ್ನು ಆಧರಿಸಿ ಟಿ20 ಕ್ರಿಕೆಟ್‌ನಲ್ಲಿ 9000 ರನ್‌ಗಳ ಗಡಿಯನ್ನು ತಲುಪಿದ ಮೂವರು ವೇಗದ ಬ್ಯಾಟರ್‌ಗಳ ಮಾಹಿತಿ ಇಲ್ಲಿದೆ.
ಬಾಬರ್ ಅಜಂ - ಪಾಕಿಸ್ತಾನ
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಇತ್ತೀಚೆಗೆ ಕೇವಲ 245 ಇನ್ನಿಂಗ್ಸ್‌ಗಳಲ್ಲಿ 9000 ರನ್‌ಗಳ ಮೈಲಿಗಲ್ಲನ್ನು ತಲುಪಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಆಗಿದ್ದಾರೆ. ಪಿಎಸ್‌ಎಲ್‌ನ ಎಲಿಮಿನೇಟರ್ ಸಮಯದಲ್ಲಿ ಅವರು "ಯೂನಿವರ್ಸ್ ಬಾಸ್' ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿದರು.ಬಾಬರ್ ಅಜಂ ಪಾಕಿಸ್ತಾನ ತಂಡಕ್ಕಾಗಿ ಕೆಲವು ಪಂದ್ಯಗಳನ್ನು ಗೆದ್ದಿದ್ದರೂ, ಅವರು ಇನ್ನೂ ಟಿ20 ಬ್ಯಾಟರ್ ಆಗಿ ತಮ್ಮ ಟಾಪ್ ಪ್ರದರ್ಶನ ನೀಡಿಲ್ಲ. ಈ ಸ್ವರೂಪದಲ್ಲಿ ಸುಮಾರು 45ರ ಸರಾಸರಿ ಹೊಂದಿದ್ದರೂ, ಅವರ ಸ್ಟ್ರೈಕ್‌ರೇಟ್ ಇನ್ನೂ 130ಕ್ಕಿಂತ ಕಡಿಮೆ ಇದೆ. ಟಿ20 ಪಂದ್ಯದ ಪವರ್‌ಪ್ಲೇ ಮತ್ತು ಮಧ್ಯಮ ಓವರ್‌ಗಳ ಸಮಯದಲ್ಲಿ ನಿಧಾನಗತಿ ಬ್ಯಾಟಿಂಗ್ ವಿಧಾನಕ್ಕಾಗಿ ಬಾಬರ್ ಅಜಂ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ.
ಕ್ರಿಸ್ ಗೇಲ್ - ವೆಸ್ಟ್ ಇಂಡೀಸ್
ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ 20 ಓವರ್‌ಗಳ ಸ್ವರೂಪದಲ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ 9000 ರನ್‌ಗಳ ಬೃಹತ್ ಮೈಲಿಗಲ್ಲು ತಲುಪಲು ಕ್ರಿಸ್ ಗೇಲ್ ಕೇವಲ 249 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರು.
ಐಪಿಎಲ್ 2016ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಪರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 38 ಎಸೆತಗಳಲ್ಲಿ 77 ರನ್ ಗಳಿಸಿದಾಗ ಈ ಸಾಧನೆ ಮಾಡಿದರು. ಆದರೆ, ಆ ಪಂದ್ಯವನ್ನು ಆರ್‌ಸಿಬಿ ಸೋತಿತ್ತು.
ಕ್ರಿಸ್ ಗೇಲ್ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದಾರೆ. ಅವರ ಫ್ರಾಂಚೈಸಿ ವೃತ್ತಿಜೀವನವು ಅತ್ಯಂತ ಯಶಸ್ವಿಯಾಗಿದ್ದು, ಅವರ ಅತ್ಯಂತ ಸ್ಮರಣೀಯ ಇನ್ನಿಂಗ್ಸ್ 2013ರ ಐಪಿಎಲ್‌ನಲ್ಲಿ ಅಜೇಯ 175 ರನ್ ಬಾರಿಸಿದ್ದರು. ಇದು ಟಿ20 ಸ್ವರೂಪದಲ್ಲಿ ದಾಖಲೆಯ- ಗರಿಷ್ಠ ಸ್ಕೋರ್ ಆಗಿದೆ.
ವಿರಾಟ್ ಕೊಹ್ಲಿ - ಭಾರತ
ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರು. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಕೇವಲ 271 ಇನ್ನಿಂಗ್ಸ್‌ಗಳಲ್ಲಿ 9000 ರನ್‌ಗಳ ಸಾಧನೆ ಮಾಡಿದ್ದಾರೆ. ದುಬೈನಲ್ಲಿ ನಡೆದ ಐಪಿಎಲ್ 2020ರ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಈ ದಾಖಲೆ ಬರೆದರು.
ವಿರಾಟ್ ಕೊಹ್ಲಿ ಟಿ20 ಸ್ವರೂಪದಲ್ಲಿ ಸಾರ್ವಕಾಲಿಕ ಅಗ್ರಮಾನ್ಯ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 53ರ ಸರಾಸರಿ ಮತ್ತು 138ರ ಸ್ಟ್ರೈಕ್ ರೇಟ್‌ನಲ್ಲಿ 4000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಆದರೆ, ವಿರಾಟ್ ಕೊಹ್ಲಿಯ ಐಪಿಎಲ್ ದಾಖಲೆ ಅಷ್ಟೊಂದು ಉತ್ತಮವಾಗಿಲ್ಲ. ಕೇವಲ 129ರ ಸ್ಟ್ರೈಕ್‌ರೇಟ್ ಮತ್ತು 36ರ ಸರಾಸರಿಯಲ್ಲಿ ಆರ್‌ಸಿಬಿ ತಂಡಕ್ಕಾಗಿ 6000ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ.