IND vs NZ Test: 372 ರನ್‌ಗಳ ಭರ್ಜರಿ ಗೆಲುವು, ಸರಣಿ ವಶಪಡಿಸಿಕೊಂಡ ಟೀಮ್ ಇಂಡಿಯಾ

IND vs NZ Test: 372 ರನ್‌ಗಳ ಭರ್ಜರಿ ಗೆಲುವು, ಸರಣಿ ವಶಪಡಿಸಿಕೊಂಡ ಟೀಮ್ ಇಂಡಿಯಾ

ಮುಂಬೈ: ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು 372 ರನ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿರುವ ಭಾರತ ತಂಡವು ಸರಣಿ ತನ್ನದಾಗಿಸಿಕೊಂಡಿದೆ.

ಶುಕ್ರವಾರ ಆರಂಭಗೊಂಡಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಮ್ ಇಂಡಿಯಾ ಮಯಂಕ್ ಅಗರವಾಲ್ ಆಕರ್ಷಕ ಶತಕ (150), ಅಕ್ಷರ್ ಪಟೇಲ್ ಅರ್ಧಶತಕ (52) ಹಾಗೂ ಶುಭಮನ್ ಗಿಲ್ 44 ರನ್‌ ನೆರವಿನಿಂದ 10 ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿತ್ತು.

ನ್ಯೂಜಿಲೆಂಡ್ ಪರ ಸ್ಪಿನ್ನರ್ ಎಜಾಜ್ ಪಟೇಲ್ ಒಬ್ಬರೇ ಹತ್ತು ವಿಕೆಟ್ ಕಬಳಿಸಿ ಪಾರಮ್ಯ ಮೆರೆದಿದ್ದರು. ಆದರೆ, ಈ ಹರ್ಷ ನ್ಯೂಜಿಲೆಂಡ್‌ಗೆ ಹೆಚ್ಚು ಹೊತ್ತು ಉಳಿಯಲಿಲ್ಲ. ಪ್ರವಾಸಿ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 62 ರನ್‌ಗಳಿಗೆ ಆಲೌಟ್ ಆಯಿತು. ಲಥಾಮ್ (10) ಹಾಗೂ ಜೆಮಿಸನ್ (17) ಬಿಟ್ಟರೆ ಉಳಿದ ಯಾರೂ ಎರಡಂಕಿಯ ರನ್ ಕೂಡ ಗಳಿಸಲಿಲ್ಲ.

ಭಾರತ ಪರ ಆರ್.ಅಶ್ವಿನ್ 4, ಮೊಹಮ್ಮದ್ ಸಿರಾಜ್ 3, ಅಕ್ಷರ್ ಪಟೇಲ್ 2 ಹಾಗೂ ಜಯಂತ್ ಯಾದವ್ 1 ವಿಕೆಟ್ ಪಡೆದು ನ್ಯೂಜಿಲೆಂಡ್‌ ಅನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ್ದರು.

ಭಾರತದ ಬ್ಯಾಟರ್‌ಗಳು ಎರಡನೇ ಇನ್ನಿಂಗ್ಸ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದರು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಮಯಂಕ್, ಎರಡನೇ ಇನ್ನಿಂಗ್ಸ್‌ನಲ್ಲಿ 62 ರನ್ ಗಳಿಸಿದರು. ಉಳಿದಂತೆ ಪೂಜಾರ 47, ಗಿಲ್ 47, ಕೊಹ್ಲಿ 36, ಅಕ್ಷರ್ ಪಟೇಲ್ ಔಟಾಗದೆ 41 ರನ್ ಗಳಿಸಿದರು. 7 ವಿಕೆಟ್ ಕಳೆದುಕೊಂಡು 276 ರನ್ ಗಳಿಸಿದ್ದ ಟೀಮ್ ಇಂಡಿಯಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನ್ಯೂಜಿಲೆಂಡ್‌ಗೆ ಗೆಲ್ಲಲು 540 ರನ್‌ಗಳ ಬೃಹತ್ ಗೆಲುವಿನ ಗುರಿ ನೀಡಿತು.

ನ್ಯೂಜಿಲೆಂಡ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ಎಜಾಜ್ ಪಟೇಲ್ ಎರಡನೇ ಇನ್ನಿಂಗ್ಸ್‌ನಲ್ಲೂ 4 ವಿಕೆಟ್ ಪಡೆದು ಮಿಂಚಿದರು.

ಮತ್ತೆ ಕಾಡಿದ ಅಶ್ವಿನ್:ಎರಡನೇ ಇನ್ನಿಂಗ್ಸ್‌ನಲ್ಲೂ ನ್ಯೂಜಿಲೆಂಡ್ ಬ್ಯಾಟರ್‌ಗಳನ್ನು ಕಾಡಿದ ಆರ್.ಅಶ್ವಿನ್ ಆರಂಭಿಕರಿಬ್ಬರನ್ನೂ ಬೇಗನೇ ಪೆವಿಲಿಯನ್‌ಗೆ ಅಟ್ಟಿ ಪಂದ್ಯದ ಮೇಲೆ ಭಾರತ ಮತ್ತಷ್ಟು ಹಿಡಿತ ಸಾಧಿಸುವಂತೆ ಮಾಡಿದರು. ಮೂರನೇ ದಿನದಾಟದ ಅಂತ್ಯಕ್ಕೆ 45 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಆಡುತ್ತಿದ್ದ ನ್ಯೂಜಿಲೆಂಡ್ ನಾಲ್ಕನೇ ದಿನವೂ ಯಾವುದೇ ಪ್ರತಿರೋಧ ತೋರಲಿಲ್ಲ. ಡ್ಯಾರಿಲ್ ಮಿಚೆಲ್ 60 ಹಾಗೂ ಹೆನ್ರಿ ನಿಕೋಲಸ್ 44 ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲ ಬ್ಯಾಟರ್‌ಗಳು ಬೇಗನೇ ಪೆವಿಲಿಯನ್ ಹಾದಿ ಹಿಡಿದರು. ಪರಿಣಾಮವಾಗಿ ನ್ಯೂಜಿಲೆಂಡ್ 167 ರನ್‌ಗಳಿಗೆ ಆಲೌಟ್ ಆಯಿತು.ಭಾರತ ಪರ ಅಶ್ವಿನ್ ಹಾಗೂ ಜಯಂತ್ ಯಾದವ್ ತಲಾ 4, ಅಕ್ಷರ್ ಪಟೇಲ್ 1 ವಿಕೆಟ್ ಕಬಳಿಸಿದರು. ಇನ್ನೊಂದು ವಿಕೆಟ್ ರನೌಟ್ ಮೂಲಕ ದೊರೆತಿತು.