ಮುಂಬೈ ತಂಡದಲ್ಲಿ ಹುಬ್ಬಳ್ಳಿಯ 'ಥ್ರೋಡೌನ್' ಪರಿಣತ

ಹುಬ್ಬಳ್ಳಿ: ಒಂಬತ್ತು ವರ್ಷಗಳಿಂದ ಇಲ್ಲಿನ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ (ಎಚ್‌ಸಿಎ)ಯಲ್ಲಿ ಆಫ್ ಸ್ಪಿನ್ನರ್ ಆಗಿದ್ದ ದರ್ಶನ್ ನೆಗಳೂರ ಈಗ ದೇಶಿ ಟೂರ್ನಿಗಳ ಬಲಿಷ್ಠ ತಂಡ ಮುಂಬೈನಲ್ಲಿ 'ಥ್ರೋಡೌನ್' (ಸೈಡ್ ಆರ್ಮ್) ಪರಿಣತರಾಗಿದ್ದಾರೆ.
12 ವರ್ಷದವರಿದ್ದಾಗ ಸ್ಪರ್ಧಾತ್ಮಕ ಕ್ರಿಕೆಟ್ ಆರಂಭಿಸಿದ್ದ ದರ್ಶನ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಧಾರವಾಡ ವಲಯದ ವಿವಿಧ ಡಿವಿಷನ್ ಟೂರ್ನಿಗಳಲ್ಲಿ ಆಡಿದ್ದಾರೆ. ಇವರಿದ್ದ ಎಚ್‌ಸಿಎ ತಂಡ 2019ರಲ್ಲಿ ಎರಡನೇ ಡಿವಿಷನ್‌ನಲ್ಲಿ ಚಾಂಪಿಯನ್ ಆಗಿತ್ತು.
ದರ್ಶನ್‌ಗೆ ಅದೊಮ್ಮೆ ಆಕಸ್ಮಿಕವಾಗಿ ನೆಟ್ಸ್‌ನಲ್ಲಿ ಭಾರತ 'ಎ' ತಂಡದ ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಿಸುವ ಅವಕಾಶ ಲಭಿಸಿತ್ತು. ಆಗ ಮಾಡಿದ ಪರಿಣಾಮಕಾರಿ ಬೌಲಿಂಗ್ ಮತ್ತು 'ಥ್ರೋಡೌನ್' ರಾಹುಲ್ ದ್ರಾವಿಡ್ ಅವರ ಗಮನ ಸೆಳೆಯಿತು. ದರ್ಶನ್ ವಿವರ ಪಡೆದ ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ಮಾಹಿತಿ ನೀಡಿದ್ದರು. ಇದಾದ ಒಂದು ತಿಂಗಳಲ್ಲೇ ದರ್ಶನ್‌ಗೆ 'ಥ್ರೋಡೌನ್' ಪರಿಣತರನ್ನಾಗಿ ನೇಮಿಸಿದ ಕುರಿತು ಎನ್‌ಸಿಎಯಿಂದ ಪತ್ರ ಬಂತು. ಅಲ್ಲಿ ಮೂರು ತಿಂಗಳು ಕೆಲಸ ಮಾಡಿ ಮುಂಬೈ ತಂಡದಲ್ಲಿ ಅವಕಾಶ ಪಡೆದರು.
ಬಳಿಕ ನಡೆದ ಕಾಮನ್‌ವೆಲ್ತ್ ತಂಡಗಳ ಕ್ಯಾಂಪ್‌ನಲ್ಲಿ ವಿವಿಧ ದೇಶಗಳ ಆಟಗಾರರು ಪಾಲ್ಗೊಂಡಿದ್ದಾಗ ದರ್ಶನ್ ತಮ್ಮ ಸಾಮರ್ಥ್ಯ ತೋರಿದರು. ಇದರಿಂದ 12 ದಿನಗಳ ಕಾಲ ನಡೆದ ಭಾರತ ತಂಡದ ಶಿಬಿರದಲ್ಲಿ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ ಹೀಗೆ ಅನೇಕ ಸ್ಟಾರ್ ಆಟಗಾರರಿಗೆ 'ಥ್ರೋಡೌನ್' ಎಸೆಯುವ ಅವಕಾಶ ಲಭಿಸಿತು.
ನೆಟ್ಸ್‌ನಲ್ಲಿ 'ಥ್ರೋಡೌನ್' ಎದುರಿಸುವುದರಿಂದ ಬ್ಯಾಟ್ಸ್‌ಮನ್‌ಗಳಿಗೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಲು ಅನುಕೂಲವಾಗುತ್ತದೆ. ಈ ಕಾರಣಕ್ಕಾಗಿ ದೇಶಿ ಟೂರ್ನಿಗಳಲ್ಲಿ ಮೊದಲು ಆಯಾ ತಂಡಗಳ ಮುಖ್ಯ ಕೋಚ್ ಅಥವಾ ಬೌಲಿಂಗ್ ಕೋಚ್ 'ಥ್ರೋಡೌನ್' ಅಭ್ಯಾಸ ಮಾಡಿಸುತ್ತಿದ್ದರು. ಈಗ ಬ್ಯಾಟ್ಸ್‌ಮನ್‌ಗಳ ಆಟದ ಗುಣಮಟ್ಟ ಹೆಚ್ಚಿಸಲು ದೇಶಿ ತಂಡಗಳು ಕೂಡ ಇತ್ತೀಚಿನ ವರ್ಷಗಳಲ್ಲಿ ಪರಿಣತರನ್ನು ನೇಮಿಸಿಕೊಳ್ಳುತ್ತಿವೆ.
'ಸ್ಟಾರ್ ಆಟಗಾರರು ಆಡುವುದನ್ನು ಟಿವಿಯಲ್ಲಿ ನೋಡಿ ಸಂಭ್ರಮಿಸುತ್ತಿದ್ದೆ. ಈಗ ಅವರಿಗೆ 'ಥ್ರೋಡೌನ್' ಮಾಡುವ, ಅವರ ಬ್ಯಾಟಿಂಗ್ ಅಭ್ಯಾಸ ಕಣ್ತುಂಬಿಕೊಳ್ಳುವ ಅವಕಾಶ ಲಭಿಸಿದೆ. ರಾಹುಲ್ ದ್ರಾವಿಡ್ ಸರ್ ಅವರಿಂದ ಅನೇಕ ವಿಷಯಗಳನ್ನು ಕಲಿತಿದ್ದೇನೆ. ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ಮೊದಲಿನಿಂದಲೂ ಆಸೆಯಿತ್ತು. ಈಗ ಆ ಹಾದಿಯಲ್ಲಿ ಸಾಗುತ್ತಿದ್ದೇನೆ. ಭವಿಷ್ಯದಲ್ಲಿ ಭಾರತ ತಂಡದಲ್ಲೂ ಕೆಲಸ ಮಾಡುವ ಆಸೆಯಿದೆ' ಎಂದರು.