ನಟ ಕಿಚ್ಚ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ : ಸತೀಶ್ ಜಾರಕಿಹೊಳಿ

ನಟ ಕಿಚ್ಚ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ : ಸತೀಶ್ ಜಾರಕಿಹೊಳಿ

ಬೆಂಗಳೂರು : ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿ ನಟ ಕಿಚ್ಚ ಸುದೀಪ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ಸುದೀಪ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ, ಸಿದ್ದಾಂತ ಒಪ್ಪಿ ಬರುವುದು ಸುದೀಪ್, ಹೈಕಮಾಂಡ್ ಗೆ ಬಿಟ್ಟ ವಿಚಾರ.

ಸುದೀಪ್ ಕಾಂಗ್ರೆಸ್ ಸೇರಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಬಹುದು. ನಾನು ಸುದೀಪ್ ಅವರನ್ನು ಭೇಟಿಯಾಗಿಲ್ಲ. ಈ ಕುರಿತು ಮಾತನಾಡಿಲ್ಲ. ರಾಜ್ಯದಲ್ಲಿ ನಟರು ರಾಜಕೀಯಕ್ಕೆ ಬರಲು ಸ್ವಲ್ಪ ಯೋಚನೆ ಮಾಡ್ತಾರೆ. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಂತೆ ನಮ್ಮಲ್ಲಿ ಇಲ್ಲ. ನಮ್ಮ ಪಕ್ಷ ಸ್ಟಾರ್ ಗಳನ್ನು ಕರೆತಂದು ಯಾವತ್ತೂ ಪ್ರಚಾರ ಮಾಡಿಲ್ಲ.ಅದರೆ ಸುದೀಪ್ ಬಂದು ಪ್ರಚಾರದಲ್ಲಿ ತೊಡಗಿದರೆ ಸ್ವಾಗತ ಎಂದರು.

ಕರ್ನಾಟಕ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ಚುನಾವಣಾ ಕಣ ರಂಗೇರುತ್ತಿದ್ದು, ನಟ ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡುವ ಕುರಿತಂತೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ , ನಟ ಕಿಚ್ಚ ಸುದೀಪ್ ಭೇಟಿಯಾಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಖಾಸಗಿ ಹೋಟೆಲ್ ನಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಕಿಚ್ಚ ಸುದೀಪ್ ಮಾತುಕತೆ ನಡೆಸಿದ್ದು, ಜೊತೆಗೆ ಒಟ್ಟಿಗೆ ಊಟ ಮಾಡಿದ್ದಾರೆ, ಈ ವೇಳೆ ಚುನಾವಣಾ ಪ್ರಚಾರ ಸಭೆಗಳಿಗೆ ಬರುವಂತೆ ಕಿಚ್ಚ ಸುದೀಪ್ ಗೆ ಡಿ.ಕೆ. ಶಿವಕುಮಾರ್ ಆಹ್ವಾನಿಸಿದ್ದಾರೆ ಎನ್ನಲಾಗಿದೆ.