29ರಿಂದ ಯಡೂರದಿಂದ ಶ್ರೀಶೈಲಕ್ಕೆ ಧರ್ಮಜಾಗೃತಿ ಪಾದಯಾತ್ರೆ: ಪ್ರತಿದಿನ 20 ಕಿ.ಮೀ. ನಡಿಗೆ

29ರಿಂದ ಯಡೂರದಿಂದ ಶ್ರೀಶೈಲಕ್ಕೆ ಧರ್ಮಜಾಗೃತಿ ಪಾದಯಾತ್ರೆ: ಪ್ರತಿದಿನ 20 ಕಿ.ಮೀ. ನಡಿಗೆ

ಬೆಳಗಾವಿ: ಶ್ರೀಶೈಲ ಸೂರ್ಯಸಿಂಹಾಸನಾಧೀಶ್ವರ ಮಹಾ ಪೀಠದ ಜಗದ್ಗುರುಗಳ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಅ.29ರಿಂದ 2023ರ ಜ.15 ರವರೆಗೆ ವಿವಿಧ ಧಾರ್ವಿುಕ, ಸಾಮಾಜಿಕ, ಜನಜಾಗೃತಿ ಹಾಗೂ ಧರ್ಮಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರದಿಂದ ಶ್ರೀಶೈಲ ಮಹಾಕ್ಷೇತ್ರದವರೆಗೆ ಪಾದಯಾತ್ರೆ ನಡೆಯಲಿದೆ. ಶ್ರೀಶೈಲ ಜಗದ್ಗುರುಗಳ ನೇತೃತ್ವದಲ್ಲಿ ಪ್ರತಿ ದಿನ 20 ಕಿ.ಮೀ. ನಡೆಯಲಾಗುವುದು. ಪಾದಯಾತ್ರೆ ಸಾಗುವ 560 ಕಿ.ಮೀ. ದಾರಿಯ ಎರಡೂ ಬದಿಯಲ್ಲಿ ಸಸಿ ನೆಡಲಾಗುವುದು. ಮಳೆಗಾಲ ಇದ್ದಿದ್ದರಿಂದ ಅರಣ್ಯ ಇಲಾಖೆ ಸಹಯೋಗದಲ್ಲಿ ಈ ಕಾರ್ಯ ಈಗಾಗಲೆ ಪ್ರಗತಿಯಲ್ಲಿದೆ ಎಂದರು. ಮಾರ್ಗದಲ್ಲಿನ ಗ್ರಾಮ, ಪಟ್ಟಣ ಹಾಗೂ ನಗರಗಳಲ್ಲಿ ಪರಿಸರ, ಧರ್ಮ, ಸಾವಯವ ಕೃಷಿ ಹಾಗೂ ಆರೋಗ್ಯ ಜಾಗೃತಿಗಾಗಿ ವಿವಿಧ ಕಾರ್ಯಕ್ರಮ ಸೇರಿ ಇಷ್ಟಲಿಂಗ ದೀಕ್ಷೆ ನೀಡುವ, ದುಶ್ಚಟಗಳ ಭಿಕ್ಷೆ ಬೇಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಪಂಚಪೀಠಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಷ್ಟು ಸುದೀರ್ಘವಾದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪಾದಯಾತ್ರೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಯ ವಿವಿಧ ಗ್ರಾಮ, ಪಟ್ಟಣಗಳ ಮೂಲಕ ತೆಲಂಗಾಣ ಮತ್ತು ಆಂಧ್ರಪದೇಶವನ್ನು ಪ್ರವೇಶ ಮಾಡಿ ಅಂತಿಮವಾಗಿ ನ.30ರಂದು ಪಾದಯಾತ್ರೆಯು ಶ್ರೀಶೈಲ ಕ್ಷೇತ್ರ ತಲುಪಲಿದೆ ಎಂದರು. ಶ್ರೀಶೈಲದಲ್ಲಿ ಪಾದಯಾತ್ರೆ ಮುಕ್ತಾಯದ ನಂತರ 42 ದಿನ ಶ್ರೀಶೈಲ ಜಗದ್ಗುರುಗಳ ತಪೋನುಷ್ಠಾನವು ನೆರವೇರಲಿದೆ.

ಅಲ್ಲದೆ, ಇಷ್ಟಲಿಂಗ ಮಹಾಪೂಜೆ, ತುಲಾ ಭಾರ, ರುದ್ರಹೋಮ ಮತ್ತು ವಿವಿಧ ಧಾರ್ವಿುಕ ಕಾರ್ಯಕ್ರಮ ಜರುಗಲಿವೆ. 2023ರ ಜ.10ರಿಂದ 15ರವರೆಗೆ ಸಮಾರೋಪ ಸಮಾರಂಭ ಜರುಗಲಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನವನ್ನೂ ಆಯೋಜಿಸಲಾಗಿದೆ. ಜತೆಗೆ ರಾಷ್ಟ್ರೀಯ ವೇದಾಂತ ಸಮ್ಮೇಳನ, ರಾಷ್ಟ್ರೀಯ ವಚನ ಸಮ್ಮೇಳನ, ರಾಷ್ಟ್ರೀಯ ವೀರಶೈವಾಗಮ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು. ಹುಕ್ಕೇರಿ ಹಿರೇಮಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಹಪುರದ ಸೂಗೂರೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೆಎಲ್​ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಇದ್ದರು.

ಭಾಷಾ ಬಾಂಧವ್ಯಕ್ಕೆ ಆದ್ಯತೆ: ಭಕ್ತಿ-ಭಾವ ಇರುವಲ್ಲಿಯೂ ಭಾಷಾ ಹಾಗೂ ಪ್ರಾಂತೀಯ ವಿಷಮ ಸ್ಥಿತಿ ತಡೆಯುವುದಕ್ಕಾಗಿ ಎಲ್ಲ ಭಾಷಿಗರನ್ನು ಸೆಳೆಯಲು ಹಾಗೂ ಉತ್ತಮ ಬಾಂಧವ್ಯ ವೃದ್ಧಿಸುವುದಕ್ಕಾಗಿ ಕನ್ನಡ, ತೆಲುಗು, ಮರಾಠಿ ವೀರಶೈವ ಸಾಹಿತ್ಯ ಗೋಷ್ಠಿಗಳನ್ನೂ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ ಎಂದು ಶ್ರೀಶೈಲ ಶ್ರೀಗಳು ಹೇಳಿದರು. ಶ್ರೀಶೈಲ ಪೀಠಕ್ಕೆ ಆಂಧ್ರಪ್ರದೇಶ ಸರ್ಕಾರ ಮಂಜೂರು ಮಾಡಿದ 10 ಎಕರೆ ಭೂಮಿ ಪೈಕಿ ಈಗಾಗಲೆ 5 ಎಕರೆ ಹಸ್ತಾಂತರಿಸಲಾಗಿದೆ. ಅಲ್ಲಿ ಬೃಹತ್ ಕಂಬಿ ಮಂಟಪ, ಯಾತ್ರಿ ನಿವಾಸ, 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ, ಗುರುಕುಲ ಮಾದರಿ ವಸತಿ ಶಾಲೆ ಆರಂಭಕ್ಕೆ ಭೂಮಿಪೂಜೆ ನಡೆಯಲಿದೆ ಎಂದರು.

ಗೌರವಾಧ್ಯಕ್ಷರಾಗಿ ಡಾ.ವಿಜಯ ಸಂಕೇಶ್ವರ: ಶ್ರೀಶೈಲ ಸೂರ್ಯಸಿಂಹಾಸನಾಧೀಶ್ವರ ಮಹಾಪೀಠದ ಜಗದ್ಗುರುಗಳ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವದ ಸಲಹಾ ಸಮಿತಿ ಗೌರವ ಅಧ್ಯಕ್ಷರಾಗಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ, ಅಧ್ಯಕ್ಷರಾಗಿ ಕೆಎಲ್​ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ನೇಮಕಗೊಂಡಿದ್ದಾರೆ. ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಅಧ್ಯಕ್ಷರಾಗಿ ಶಾಮನೂರ ಶಿವಶಂಕರಪ್ಪ, ಕಾರ್ಯಾಧ್ಯಕ್ಷರಾಗಿ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ಖಜಾಂಚಿಯಾಗಿ ಜಗದೀಶ ಗುಡಗುಂಡಿಮಠ ಅವರನ್ನು ನೇಮಕ ಮಾಡಲಾಗಿದ್ದು, ಬೃಹತ್ ಸಮಾರಂಭದಲ್ಲಿ 50ಕ್ಕೂ ಹೆಚ್ಚು ಮಠಾಧೀಶರು ಸೇರಿ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಶೈಲ ಜಗದ್ಗುರು ತಿಳಿಸಿದರು.