ಸರ್ ರೋಹಿಣಿ ಸಿಂಧೂರಿ ಕ್ಷಮಿಸಬಹುದಾಗಿತ್ತು: ಮತ್ತೆ ಶಾಸಕ ಸಾರಾ ಮಹೇಶ್ ಬಳಿ IAS ಅಧಿಕಾರಿ ಮಣಿವಣ್ಣನ್ ಮಾತು

ಸರ್ ರೋಹಿಣಿ ಸಿಂಧೂರಿ ಕ್ಷಮಿಸಬಹುದಾಗಿತ್ತು: ಮತ್ತೆ ಶಾಸಕ ಸಾರಾ ಮಹೇಶ್ ಬಳಿ IAS ಅಧಿಕಾರಿ ಮಣಿವಣ್ಣನ್ ಮಾತು

ಬೆಂಗಳೂರು: ಇಂದು ನಡೆದಂತ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಐಪಿಎಸ್ ಅಧಿಕಾರಿ ರೂಪಾ ಡಿ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಸಮರದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿದೆ. ಅಲ್ಲದೇ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂ ಬೊಮ್ಮಾಯಿ ಸಿಎಸ್ ಗೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ ಸಿಎಂ ಬೊಮ್ಮಾಯಿ ಬೇಟಿಗೆ ಬಂದಿದ್ದಂತ ಶಾಸಕ ಸಾರಾ ಮಹೇಶ್ ಅವರನ್ನು ಮತ್ತೆ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು ಬೇಟಿಯಾಗಿ, ಸರ್ ರೋಹಿಣಿ ಸಿಂಧೂರಿ ಕ್ಷಮಿಸಬಹುದಿತ್ತು ಎಂದು ಮಾತನಾಡಿದ್ದಾಗಿ ತಿಳಿದು ಬಂದಿದೆ.

ಈಗಾಗಲೇ ಸಾರಾ ಮಹೇಶ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವಿನ ಸಮರ ಬಹಿರಂಗಗೊಂಡಿತ್ತು. ರೋಹಿಣಿ ಸಿಂಧೂರಿ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದು ಮಾಜಿ ಸಚಿವರು ಕ್ರಮಕ್ಕೆ ಒತ್ತಾಯಿಸಿದ್ದರು. ಕೆಲ ದಿನಗಳ ಹಿಂದೆ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು ಮಾಜಿ ಸಚಿವ ಸಾರಾ ಮಹೇಶ್ ಅವರ ಬಳಿಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಕರೆದೊಯ್ದಿದ್ದರು ಸಂಧಾನ ಯತ್ನ ನಡೆಸಿದ್ದರು.

ಈ ಬೆನ್ನಲ್ಲೇ ಇಂದು ಸಿಎಂ ಬಸವರಾಜ ಬೊಮ್ಮಾಯಿ ಬೇಟಿಗಾಗಿ ವಿಧಾನಸೌಧಕ್ಕೆ ಬಂದಿದ್ದಂತ ಸಾರಾ ಮಹೇಶ್ ಅವರು ಕಾಣುತ್ತಿದ್ದಂತೇ, ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು, ವಿಧಾನಸೌಧದ ಕೊಠಡಿ ಸಂಖ್ಯೆ 334ರ ಬಳಿ ಆಗಮಿಸಿ, ಅವರೊಂದಿಗೆ ಕೆಲ ಕಾಲ ಮಾತನಾಡಿದ್ದಾರೆ ಎನ್ನಲಾಗಿದೆ.

ಸರ್ ರೋಹಿಣಿ ಸಿಂಧೂರಿಯನ್ನು ಕ್ಷೆಮಿಸಬಹುದಾಗಿತ್ತು ಎಂದು ಹೇಳಿದ್ದಾರೆ ಎನ್ನಲಾಗಿದೆ. ಆಗ ನಾನು ಮಾಧ್ಯಮ ಸುದ್ದಿಗೋಷ್ಠಿಯಲ್ಲಿಯೇ ಅವರನ್ನು ಕ್ಷಮಿಸಿದ್ದೇನೆ ಎಂದು ಹೇಳಿದ್ದೇನೆ ಅಂತ ಹೇಳಿದ್ದಾರೆ ಎನ್ನಲಾಗಿದೆ. ಆಗ ಇದನ್ನು ಬೆಳೆಸಬಾರದಾಗಿತ್ತು ಎಂದು ಮಣಿವಣ್ಣನವರ್ ಮಾತನಾಡುತ್ತಿದ್ದಾಗಲೇ, ಮಾಧ್ಯಮದವರು ಅವರ ಬಳಿಗೆ ತೆರಳಿದಾಗ, ಅಲ್ಲಿಗೆ ಆ ವಿಷಯ ಬಿಟ್ಟು, ಸಿಎಂ ಬೇಟಿಗೆ ಸಾರಾ ಮಹೇಶ್ ತೆರಳಿದರು ಎನ್ನಲಾಗಿದೆ. ಈ ಮೂಲಕ ಇಂದು ಕೂಡ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು ರೋಹಿಣಿ ಸಿಂಧೂರಿ ಪರವಾಗಿ ಮಾಜಿ ಸಚಿವ ಸಾರಾ ಮಹೇಶ್ ಅವರಲ್ಲಿ ಬ್ಯಾಟ್ ಬೀಸಿದ್ದಾರೆ.