ಸಾರ್ವಜನಿಕರಿಂದ ಹಣ ವಸೂಲಿ : ಮದ್ದೂರಿನಲ್ಲಿ ನಕಲಿ ಪೊಲೀಸ್ ಬಂಧನ

ಸಾರ್ವಜನಿಕರಿಂದ ಹಣ ವಸೂಲಿ : ಮದ್ದೂರಿನಲ್ಲಿ ನಕಲಿ ಪೊಲೀಸ್ ಬಂಧನ

ಮಂಡ್ಯ : ಪೋಲೀಸ್ ಸಮವಸ್ತ್ರ ಧರಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಬೆಂಗಳೂರು ಮೂಲದ ವ್ಯಕ್ತಿಯನ್ನು ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಪೋಲೀಸರು ಸೋಮವಾರ ಬಂಧಿಸಿದ್ದಾರೆ.

ಬೆಂಗಳೂರಿನ ಗೊಟ್ಟಿಗೆರೆ ಮೂಲದ ಸಂಜಯ್ (40) ಬಂಧಿತ ವ್ಯಕ್ತಿ.

ಈತನನ್ನು ವಿಚಾರಣೆ ನಂತರ ಬಂಧಿಸಿ ಮದ್ದೂರು ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಆರೋಪಿ ಸಂಜಯ್ ಕೆ.ಎಂ.ದೊಡ್ಡಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪೋಲೀಸ್ ಸಮವಸ್ತ್ರ ಧರಿಸಿ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳನ್ನು ತಡೆದು ಸಂಚಾರ ನಿಯಮ ಉಲ್ಲಂಘಿಸಿದ್ದಿರಿ ಎಂದು ಸವಾರರಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದನು.

ಈತನ ಬಗ್ಗೆ ಸಾರ್ವಜನಿಕರು ನಕಲಿ ಪೋಲೀಸ್ ಅಧಿಕಾರಿ ಸಂಜಯ್ ಬಗ್ಗೆ ಕೆ.ಎಂ.ದೊಡ್ಡಿ ಪೋಲೀಸರಿಗೆ ಮಾಹಿತಿ ನೀಡಿದರು. ಠಾಣೆಯ ಇನ್ಸ್ಪೆಕ್ಟರ್ ಆನಂದ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮಂಡ್ಯ ರಸ್ತೆಯ ಬಾಲಾಜಿ ವೈನ್ ಸ್ಟೋರ್ ಬಳಿ ದೆಹಲಿ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಬಂದು ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದಾಗ ಇನ್ಸ್ಪೆಕ್ಟರ್ ಆನಂದ್ ಸಂಜಯ್ ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ನಕಲಿ ಪೋಲೀಸ್ ಎಂದು ಬೆಳಕಿಗೆ ಬಂದಿದೆ.

ವರದಿ : ಗಿರೀಶ್ ರಾಜ್ ಮಂಡ್ಯ